ಪ್ರಾಕೃತ ಭಾಷೆಗಳು ಮತ್ತು ಸಾಹಿತ್ಯ

ಈ ಲೇಖನದಲ್ಲಿ ಎರಡು ಅಧ್ಯಾಯಗಳಿವೆ: 1 ಪ್ರಾಕೃತ ಭಾಷೆ, ಅದರ ಬೆಳವಣಿಗೆ, ಬಳಕೆ ಮತ್ತು ಉಪಭಾಷೆಗಳು 2 ಪ್ರಾಕೃತ ಶಾಸನಗಳು ಮತ್ತು ನಾಟಕಗಳು 3 ಜೈನಧರ್ಮ, ಧರ್ಮಕ್ಕೆ ಮೊದಲಿನ ಮತ್ತು ಮುಂದಣ ಕೃತಿಗಳು 4 ಭಾವಗೀತೆಗಳ ಸಂಕಲನಗಳು, ಉಪದೇಶ ಸೂಕ್ತಿಗಳು, ಮತ್ತು ಸ್ತೋತ್ರಗಳು 5 ಜೈನ ಮಹಾರಾಷ್ಟ್ರೀ ಮತ್ತು ಅಪಭ್ರಂಶಗಳಲ್ಲಿ ಕಥನ ಸಾಹಿತ್ಯ 6 ಪ್ರೌಢಕಾವ್ಯ ಮತ್ತು ಚಂಪೂ 7 ಮತಸಿದ್ಧಾಂತಗಳಿಗೆ ಸಂಬಂಧಪಟ್ಟ ಪ್ರಕರಣ ಗ್ರಂಥಗಳು 8 ವ್ಯಾಕರಣಗಳು 9 ನಿಘಂಟುಗಳು 10 ಅಲಂಕಾರಗಳು ಮತ್ತು ಛಂದಸ್ಸುಗಳನ್ನು ಕುರಿತ ಗ್ರಂಥಗಳು 11 ಜ್ಯೋತಿಶ್ಶಾಸ್ತ್ರ ವೈದ್ಯಶಾಸ್ತ್ರ ಗ್ರಂಥಗಳು 12 ಉಪಸಂಹಾರ.

	1 ಪ್ರಾಕೃತ ಭಾಷೆ, ಅದರ ಬೆಳವಣಿಗೆ, ಬಳಕೆ ಮತ್ತು ಉಪಭಾಷೆಗಳು: ಇಂಡೋ ಆರ್ಯನ್ ಭಾಷೆ, ಸ್ಥೂಲವಾಗಿ ಹೇಳಬೇಕಾದರೆ, ಸಂಸ್ಕøತ ಮತ್ತು ಪ್ರಾಕೃತ ಎಂಬ ಎರಡು ಪಾತ್ರಗಳಲ್ಲಿ ಹರಿದಿದೆ; ಇವು ನಿರಂತರವಾಗಿ ಬೇರೆ ಬೇರೆಯ ಘಟ್ಟಗಳಲ್ಲಿ ಒಂದನ್ನೊಂದು ಪ್ರಭಾವಿಸಿವೆ. ಸ್ವಾಭಾವಿಕ, ಸಾಧಾರಣ ಇತ್ಯಾದಿ ಅರ್ಥಗಳುಳ್ಳ ಪ್ರಾಕೃತವೆಂಬ ಶಬ್ದ, ಸಂಸ್ಕøತ ಎಂದರೆ ನಿಷ್ಕøಷ್ಟವಾಗಿ ರಚಿಸಿದ ನಯವಾಗಿರುವ ಮತ್ತು ನಾಜೂಕಾಗಿರುವ ಭಾಷೆಯ ಜೊತೆಗೂಡಿಯೇ ಇದ್ದಂಥ ಸಾಮಾನ್ಯ ಜನರ ಅಪರಿಷ್ಕøತವಾದ ಉಪಭಾಷೆಗಳನ್ನೂ ನಿರ್ದೇಶಿಸುತ್ತದೆ. ಮೊದಮೊದಲು ಪ್ರಾಕೃತಗಳು ಸಾಮಾನ್ಯ ಜನರು ತಮ್ಮ ದೈನಂದಿನ ವ್ಯಾವಹಾರಿಕ ಜೀವನದಲ್ಲಿ ಬಳಸುತ್ತಿದ್ದ ಉಪಭಾಷೆಗಳಾಗಿದ್ದುವು; ಸಂಸ್ಕøತವಾದರೂ ಪುರೋಹಿತ ಪಂಡಿತ ಹಾಗೂ ರಾಜವಂಶೀಯರಾದ ಬುದ್ಧಿಸಂಪನ್ನರು ತಮ್ಮ ಧಾರ್ಮಿಕ ಕರ್ಮಗಳಿಗೂ ವೈದುಷ್ಯಕ್ಕೂ ಬಳಸುತ್ತಿದ್ದ ಭಾಷೆ. ಈ ಜನಗಳೂ ತಮ್ಮ ದೈನಂದಿನ ವ್ಯವಹಾರಗಳಿಗೆ ಬಳಸುತ್ತಿದ್ದ ಭಾಷೆ ಸಂಸ್ಕøತಕ್ಕಿಂತ ಸಾಮಾನ್ಯ ಜನರಾಡುವ ಪ್ರಾಕೃತಗಳಿಗೆ ಹತ್ತಿರವಾಗಿತ್ತೆಂದು ತೋರುತ್ತದೆ. ಪ್ರಾಕೃತ ಸಹಜವಾಗಿ ಪ್ರಾಪ್ತವಾದ ಭಾಷೆ; ಸಂಸ್ಕøತವಾದರೊ ಸಾಹಿತ್ಯದ ಮುಖ್ಯ ಭಾಷೆಯಾಗಿ, ವಾಕ್ಯರಣ ಮತ್ತು ಶಿಕ್ಷಾ ಶಾಸ್ತ್ರಗಳಲ್ಲಿ ಕುಶಲ ಸಂಸ್ಕಾರವನ್ನು ಅಪೇಕ್ಷಿಸುವಂಥದು.

	ಪುರೋಹಿತ ತನ್ನ ಧಾರ್ಮಿಕ ಗೀತಗಳಲ್ಲಿ ಬಳಸುತ್ತಿದ್ದ ಅಲಂಕಾರಯುಕ್ತವಾದ ವೇದಗಳ ಭಾಷೆಗೆ ಸಮಕಾಲೀನವಾಗಿ, ಪ್ರಾಯಶಃ ಕುಲಗಳ ಪಂಗಡಗಳು ಮತ್ತು ಸಾಮಾಜಿಕ ಅಂತಸ್ತುಗಳು ಇತ್ಯಾದಿ ಭಿನ್ನತೆಗಳ ದೆಶೆಯಿಂದ, ಅಥವಾ ಸಾಹಿತ್ಯಕ್ಕೂ ಮನೆಮಾತಿಗೂ ಒದಗಿಸಿಕೊಳ್ಳುವ ಸಲುವಾಗಿ ಅಥವಾ ದೇಶೀಯರ ಪಂಗಡಗಳು ಆರ್ಯಭಾಷೆಗಳನ್ನು ಬಳಸುತ್ತಿದ್ದುದರ ಪರಿಣಾಮವಾಗಿ ಅನೇಕ ಉಪಭಾಷೆಗಳು ಜನಸಾಮಾನ್ಯರಲ್ಲಿ ಹುಟ್ಟಿಕೊಂಡಿದ್ದುವು. ಪುಸ್ತಕದ ಭಾಷೆ, ಅನೇಕ ವೇಳೆ, ಜನರಾಡುವ ಉಪಭಾಷೆಗಳಿಗಿಂತ ಭಿನ್ನವಾಗಿತ್ತು. ವೈದಿಕ ಸಾಹಿತ್ಯದಲ್ಲಿ ಜನರಾಡುವ ಮಾತುಗಳ ಕೆಲವು ನಿದರ್ಶನಗಳು ಸಿಕ್ಕುತ್ತವೆ. ಇವೇ ಮೂಲ ಪ್ರಾಕೃತಗಳು; ಆದರೆ ಆ ಭಾಷೆಗಳಲ್ಲಿ ಯಾವ ಸಾಹಿತ್ಯವೂ ನಮಗೆ ದೊರೆತಿಲ್ಲ. ಪಾಣಿನಿ ಮತ್ತು ಆತನ ಸೂತ್ರಗಳಿಗೆ ಭಾಷ್ಯವನ್ನು ಬರೆದವರಿಂದ ಒಂದು ಪರಿಣತಿಗೆ ಬಂದ ಪ್ರೌಢ ಸಂಸ್ಕøತ ಭಾಷೆ ವೈದಿಕ ಸಾಹಿತ್ಯದಲ್ಲಿ ಮೈದೋರುವ ಹಳೆಯುಳಿಕೆಗಳನ್ನೆಲ್ಲ ಮರ್ಯಾದೆಯಿಂದ ಹೊರಹಾಕಿದೆ; ಮತ್ತು ಬುದ್ಧಿಪೂರ್ವಕವಾಗಿಯೆ ಜನಬಳಕೆಯ ಮಾತುಗಳನ್ನು ತೊರೆದಿದೆ. ಇಷ್ಟು ನಿಷ್ಕøಷ್ಟವಾಗಿ ವ್ಯವಸ್ಥೆಗೊಳಿಸಿದ ಭಾಷೆಯನ್ನು ವಿಶಿಷ್ಟರಾದ ಬುದ್ಧಿವಂತರು ಮಾತ್ರ ಬಳಸಬಹುದಾಗಿತ್ತು; ಅದು ವಿದ್ವತ್ ಸಭೆಯ ಭಾಷೆ, ಜನಸಾಮಾನ್ಯರ ಮಾತಲ್ಲ; ಉಪದೇಶಕನಾಗಲಿ ರಾಜನಾಗಲಿ ಜನರನ್ನು ಕುರಿತು ಏಕಸ್ವಾಮ್ಯದಲ್ಲಿರುವ ಗುಡಿಯಿಂದಲ್ಲ, ಪರಿವೇಷ್ಟಿತ ಯಜ್ಞಭೂಮಿಯಿಂದಲ್ಲ, ಸಾರ್ವಜನಿಕ ವೇದಿಕೆಯಿಂದ ಭಾಷಣ ಮಾಡಬೇಕಾಗಿ ಬಂದಾಗ, ಜನರಾಡುತ್ತಿದ್ದ ಉಪಭಾಷೆಯೊಂದನ್ನು ಎತ್ತಿಕೊಳ್ಳುವ ಬಯಕೆ ಸಹಜವೇ ಆಗಿತ್ತು. ಈ ರೀತಿಯಲ್ಲಿ ಕ್ರಿ.ಪೂ. ಆರನೆಯ ಶತಮಾನದಲ್ಲಿ ಮಹಾವೀರ ಮತ್ತು ಬುದ್ಧ ಇವರು ಪೂರ್ವ ಭಾರತದ ಸ್ಥಳೀಯ ಪ್ರಾಕೃತದಲ್ಲಿ ಉಪದೇಶ ಮಾಡಲು ಇಚ್ಛಿಸಿದರು. ಆ ಮಹಾಪುರುಷ ಚಕ್ರವರ್ತಿ ಅಶೋಕ (ಕ್ರಿ.ಪೂ. ಮೂರನೆಯ ಶತಮಾನ) ಮತ್ತು ಆ ಬಳಿಕ ಒಂದು ನೂರು ವರುಷಗಳಾದ ಮೇಲೆ ಖಾರವೇಲನೆಂಬ ದೊರೆ-ಇವರು ತಮ್ಮ ಪ್ರಜೆಗಳನ್ನು ಕುರಿತು ಭಾಷಣ ಮಾಡುವಾಗ ಪ್ರಾಕೃತವನ್ನೇ ಬಳಸಿದರು. ಗುಪ್ತರ ಕಾಲದವರೆಗೂ ಪ್ರಾಯಶಃ ಭಾರತದ ಎಲ್ಲ ಸ್ಥಳಗಳಲ್ಲೂ ಶಾಸನಗಳಿಗೆ ಪ್ರಾಕೃತಭಾಷೆಗಳನ್ನೆ ನಿರರ್ಗಳವಾಗಿ ಉಪಯೋಗಿಸುತ್ತಿದ್ದರು. ಕ್ರಿ.ಶ. ಸುಮಾರು ಒಂದನೆಯ ಶತಮಾನದವರೆಗೂ ಪ್ರಾಚೀನ ಶಾಸನಗಳು ಪ್ರಾಕೃತದಲ್ಲಿಯೇ ಇವೆ. ಉಪಭಾಷೆಗಳಲ್ಲಿಯ ಪರಸ್ಪರ ಭಿನ್ನತೆಗಳು ಸಾಕಷ್ಟು ವಿಶದವಾಗಿವೆ. ಆದರೆ ಯಾವ ಯಾವ ಸ್ಥಳಗಳಲ್ಲಿ ಅವು ಬಳಕೆಯಲ್ಲಿದ್ದುವು ಎಂಬ ಸಮಸ್ಯೆಯನ್ನು ಬಿಡಿಸುವುದು ಅಷ್ಟು ಸುಲಭವಾಗಿಲ್ಲ. ಸ್ವಲ್ಪಮಟ್ಟಿಗೆ ಅಶೋಕನ ಶಾಸನಗಳು ಆಯಾ ಪ್ರದೇಶಗಳಿಗೆ ತಕ್ಕಂತೆ ಉಪಭಾಷೆಗಳ ವ್ಯತ್ಯಾಸಗಳನ್ನು ತೋರಿಸುತ್ತವೆ. ಆದರೆ ಅವು ನಮಗೆ ತಿಳಿದು ಬಂದಿರುವ ಸಾಹಿತ್ಯಕ ಉಪಭಾಷೆಗಳಿಗೆ ಸ್ವಲ್ಪವೂ ಹೊಂದದಷ್ಟು ವಿಭಿನ್ನವಾಗಿಲ್ಲ. ಕೆಲವು ವಿಸ್ವಾಂಸರು ಪ್ರಾಚೀನ ಲೌಕಿಕ ಸಾಹಿತ್ಯದ ನಾಟಕ, ಮಹಾಕಾವ್ಯ, ಭಾವಗೀತೆಗಳು ಇತ್ಯಾದಿ ಪ್ರಕಾರಗಳು ಪ್ರಾಕೃತ ಭಾಷೆಯಲ್ಲಿದ್ದುವೆಂದು ಅಭಿಪ್ರಾಯಪಡುತ್ತಾರೆ. ಅಲ್ಲದೆ ಕ್ರಿ.ಶ. ಎರಡನೆಯ ಶತಮಾನದ ಯಾವುದೋ ಒಂದು ಸಮಯದಲ್ಲಿ ಪಶ್ಚಿಮ ಭಾರತದ ಶಕ ಸತ್ರಪರ ಪ್ರಚೋದನೆಯಿಂದ ಸಂಸ್ಕøತ ನಿಧಾನವಾಗಿ ಲೌಕಿಕ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸತೊಡಗಿತು. ಕವಿಗಳು ತಮ್ಮ ನಿತ್ಯದ ವ್ಯವಹಾರಕ್ಕೆ ಬಳಸುತ್ತಿದ್ದ ಪ್ರಾಕೃತಗಳ, ಎಂದರೆ ತಮ್ಮ ಮನೆಮಾತಿನ ಪ್ರಭಾವದಿಂದಲೊ ಏನೋ ಅವರ ಮಹಾಕಾವ್ಯಗಳ ನುಡಿಗಟ್ಟು ಪ್ರಾಕೃತ ಭಾಷೆಯ ಸೋಂಕನ್ನು ತೋರಿಸುತ್ತದೆ. ಬೌದ್ಧರ ಗಾಥಾ ಸಾಹಿತ್ಯ ಸಂಸ್ಕøತ ಮತ್ತು ಪ್ರಾಕೃತಗಳ ವಿಚಿತ್ರ ಸಮ್ಮಿಶ್ರಣಕ್ಕೆ ಒಂದು ಒಳ್ಳೆಯ ನಿದರ್ಶನವಾಗಿದೆ. ಭಾರತದ ನಾಟಕಗಳಲ್ಲಿ ಸಮ್ಮಿಶ್ರ ಭಾಷಾ ಪ್ರಯೋಗಗಳು ನಮಗೆ ಎದ್ದುತೋರುತ್ತವೆ. ಒಂದೇ ನಾಟಕದಲ್ಲಿ ಬೇರೆ ಬೇರೆ ಪಾತ್ರಗಳು ಬೇರೆ ಬೇರೆ ಭಾಷೆಗಳನ್ನಾಡುತ್ತವೆ. ನಮಗೆ ತಿಳಿದು ಬಂದಿರುವ ಅಶ್ವಘೋಷನ (ಕ್ರಿ. ಶ. 100) ಪ್ರಾಚೀನತಮ ನಾಟಕಗಳು ಈ ಅಭ್ಯಾಸ ಬಹಳ ಹಿಂದಿನಿಂದ ಇತ್ತೆಂಬುದನ್ನು ಅಸಂದಿಗ್ಧವಾಗಿ ತೋರಿಸಿಕೊಡುತ್ತವೆ. ಈ ಉಪಭಾಷೆಗಳನ್ನು ಮೊದಲು ಪ್ರಯೋಗಿಸಿದಾಗ ಅವು ಆ ಕಾಲದಲ್ಲಿ ಜನರಾಡುತ್ತಿದ್ದ ಭಾಷೆಗಳಾಗಿದ್ದವೆಂಬ ವಿಚಾರದಲ್ಲಿ ಸಂದೇಹಕ್ಕೆಡೆಯಿಲ್ಲವೆ ಇಲ್ಲ. ಆದರೆ ಆ ತರುವಾಯ ಅವು ಒಂದು ಪಡಿಯಚ್ಚಿನಂತಾದುವು, ಅವುಗಳ ಬಳಕೆ ಸಂಪ್ರದಾಯ ಬದ್ಧವಾಯಿತು. ರಾಜ ಮುಂತಾದವರು ಸಂಸ್ಕøತವನ್ನಾಡುತ್ತಾರೆ, ಶ್ರೀಮಂತ ಸತಿಯರು ಶೌರಸೇನಿಯನ್ನು ಇತರ ಕೀಳುದರ್ಜೆಯ ಪಾತ್ರಗಳು ಮಾಗಧಿಯನ್ನು ಬಳಸುತ್ತವೆ. ಇದಲ್ಲದೆ ಇನ್ನೂ ಬೇರೆಯ ಮುಖ್ಯ ಉಪಭಾಷೆಗಳಿವೆ. ಅವನ್ನು ಇಲ್ಲಿ ಹೇಳುವುದು ಅನಾವಶ್ಯಕ. ತತ್ತ್ವ ಮತ್ತು ಪ್ರಯೋಗಗಳನ್ನು ಒಟ್ಟಿಗೆ ಇಟ್ಟು ನೋಡುವಲ್ಲಿ, ಈ ಸಾಂಕೇತಿಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರಲಿಲ್ಲವೆಂಬುದು ವಿಶದವಾಗುತ್ತದೆ.

	ಪ್ರಾಕೃತ ಭಾಷೆಗಳ ವೈಯಾಕಾರಣರು ಮಹಾರಾಷ್ಟ್ರೀ ಶೌರಸೇನೀ ಮಾಗಧೀ ಪೈಶಾಚೀ ಮತ್ತು ಅಪಭ್ರಂಶಗಳೆಂಬ ಪ್ರಾಕೃತ ಉಪಭಾಷೆಗಳ ಹರಕುಮುರುಕಾದ ವಿವರಣೆಯನ್ನು ಕೊಡುತ್ತಾರೆ. ಪಾಳಿ ಮತ್ತು ಅರ್ಧಮಾಗಧಿಗಳೂ ಬೌದ್ಧ ಮತ್ತು ಜೈನ ಧರ್ಮಶಾಸ್ತ್ರಗಳಲ್ಲಿ ಉಪಯೋಗಿಸಲ್ಪಡುತ್ತಿರುವ ಪ್ರಾಕೃತಗಳು. ಪರಸ್ಪರವಾಗಿ ಸಂಬಂಧವುಳ್ಳ ಮತ್ತು ಅಮುಖ್ಯವಾದ ಉಪಭಾಷೆಗಳಿಗೆ ಇನ್ನೂ ಅನೇಕ ಹೆಸರುಗಳು ಬಳಕೆಯಲ್ಲಿವೆ. ಭಾಷಾವಿಕಾಸದ ದೃಷ್ಟಿಯಿಂದ, ಶಾಸನಗಳ ಪ್ರಾಕೃತಗಳಾದ ಪಾಳೀ ಪೈಶಾಚಿಗಳು ಎಲ್ಲಕ್ಕೂ ಮುಂಚಿನ ತರಗತಿಯೊಂದಕ್ಕೆ ಸೇರಿದವು. ಶೌರಸೇನೀ ಮಾಗಧಿಗಳು ಆ ಬಳಿಕ ಬರುತ್ತವೆ. ಅವುಗಳಲ್ಲಿ ಒಂದು ಮಧ್ಯಪ್ರದೇಶದ ಉಪಭಾಷೆ ಮತ್ತೊಂದು ಪೂರ್ವ ಪ್ರದೇಶದ್ದು. ಅರ್ಧಮಾಗಧಿ ತನ್ನ ಶಬ್ದಕೋಶ, ವಾಕ್ಯ ರಚನೆ ಮತ್ತು ಶೈಲಿಗಳಲ್ಲಿ ಪಾಳಿಗೆ ಹತ್ತಿರವಾಗಿದೆ; ಅದರದು ಶಬ್ದೋಚ್ಚಾರಣೆಯಲ್ಲಿ ಅದಕ್ಕಿಂತ ಈಚಿನ ಕಾಲದ್ದು. ಮಹಾರಾಷ್ಟ್ರೀ ಪ್ರೌಢವಾದ ಮಹಾಕಾವ್ಯ ಮತ್ತು ಜನಪ್ರಿಯವಾದ ವಿಷಯಗಳನ್ನು ಕುರಿತ ಭಾವಗೀತೆ ಇವೆರಡಕ್ಕೂ ಒದಗುವಂಥ ವಿಕಾಸ ಸಂಕೋಚ ಸಾಮಥ್ರ್ಯವುಳ್ಳ ಭಾಷೆ. ಈ ಉಪಭಾಷೆಗಳಲ್ಲಿ ಕೆಲವು ಸ್ಥಳದ ನುಡಿಯಿಂದ ಸಾಹಿತ್ಯದ ದರ್ಜೆಗೆ ಏರಿಸಲ್ಪಟ್ಟಿವೆ. ಆದರೆ ವೈಯಾಕರಣರು ಅವುಗಳ ಪ್ರಾದೇಶಿಕ ಸೌರಭಕ್ಕೆ ಗಮನ ಕೊಡದೆ ಕ್ರಮೇಣ ಪಡಿಯಚ್ಚಾಗಿ ಮಾಡಿ ಬಿಟ್ಟಿದ್ದಾರೆ. ಆ ವೇಳೆಗಾಗಲೆ ಜನರಾಡುವ ಭಾಷೆಗಳು ಮುಂದುವರಿದಿದ್ದವು. ಸಾಹಿತ್ಯದಲ್ಲಿ ಉಪಯೋಗಿಸುತ್ತಿದ್ದ ಪ್ರಾಕೃತಗಳಿಗೂ ಸಮಕಾಲೀನವಾದ ಜನರಾಡುತ್ತಿದ್ದ ಭಾಷೆಗೂ ನಡುವಣ ಅಂತರ ಕ್ರಮೇಣ ಹೆಚ್ಚುತ್ತ ಹೋಯಿತು. ಜನತಾ ಭಾಷಾಂಶಗಳು, ಎಂದರೆ ಜನರಾಡುತ್ತಿದ್ದ ಮಾತಿನ ತುಣಕು ಮಿಣಕುಗಳು, ಪ್ರಾಚೀನ ಪ್ರಾಕೃತ ಕೃತಿಗಳಲ್ಲಿ ಕೂಡ ಆಗೀಗ ಸುಳಿದಾಡುತ್ತಿದ್ದುವು. ಕ್ರಿ.ಶ. ಐದನೆಯ ಶತಮಾನದ ಹೊತ್ತಿಗೆ ಸಂಸ್ಕøತ ಮತ್ತು ಪ್ರಾಕೃತಗಳ ಸಾಹಿತ್ಯಕ ರೂಪಗಳು ಪಡಿಯಚ್ಚಾಗಿಬಿಟ್ಟಿದ್ದವು. ಜನರಾಡುವ ಭಾಷೆಗಳಿಂದ ಅವು ಹೊರತಾಗಿ ಹೋಗಿರುವ ಅಂಶ ಹೆಚ್ಚು ಹೆಚ್ಚಾಗಿ ಸ್ಪಷ್ಟವಾಗುತ್ತಿತ್ತು. ಹಾಗೂ ಆಗಿನ ಜನರಾಡುವ ಭಾಷೆಗಳ ಪ್ರತಿನಿಧಿಯಾದ ಮತ್ತು ತನ್ನ ಸಾಹಿತ್ಯ ಸ್ವರೂಪದಲ್ಲಿ ಸಂಸ್ಕøತ ಮತ್ತು ಪ್ರಾಕೃತ ಇವೆರಡಕ್ಕೂ ಭಿನ್ನವೆನಿಸುವ ಅಪಭ್ರಂಶಗಳನ್ನು ಸಾಹಿತ್ಯದ ಭಾಷೆಯ ಮಟ್ಟಕ್ಕೇರಿಸಲು ಮತ್ತೊಂದು ಬಾರಿ ಪ್ರಯತ್ನ ನಡೆಯಿತು. ಸಂಸ್ಕøತ ಮತ್ತು ಪ್ರಾಕೃತಗಳ ಹಾಗೆ ಅಪಭ್ರಂಶವೂ ಪ್ರಾದೇಶಿಕವಾಗಿ ನಿಲ್ಲಲಿಲ್ಲ. ಅಪಭ್ರಂಶದ ಪ್ರೌಢ ಸಾಹಿತ್ಯ ಸ್ವರೂಪ ಪ್ರಾಚೀನ ರಾಜಾಸ್ಥಾನಿಯ ಮತ್ತು ಪ್ರಾಚೀನ ಗುಜರಾತಿಯ ಉಗ್ರಗಾಮಿಯೊ ಎಂಬ ಹಾಗೆ ತೋರುತ್ತದೆ. ಆದರೆ ನಮ್ಮೆಣಿಕೆಯ ಪ್ರದೇಶದಿಂದಾಚೆಗೂ ಹರಡಿ ಬಹುವಾಗಿ ಪ್ರಚಾರದಲ್ಲಿತ್ತೆಂಬುದು ತಿಳಿದು ಬಂದಿದೆ. ಅದು ತನ್ನ ಶಬ್ದಕೋಶಕ್ಕೆ ಸಾಹಿತ್ಯಕ ಪ್ರಾಕೃತಗಳಿಗೆ ತುಂಬ ಋಣಿ, ನಾಮಪದ ಮತ್ತು ಕ್ರಿಯಾಪದಗಳ ಪ್ರತ್ಯಯಗಳು ಸರ್ವನಾಮಗಳು ಕ್ರಿಯಾವಿಶೇಷಗಳು ಅವ್ಯಯಗಳು ಇಂಥ ಇತರ ಮುಖ್ಯಾಂಶಗಳನ್ನು ಅದು ಜನಸಾಮಾನ್ಯರ ಮಾತಿನ ಪದರದಿಂದ ತೆಗೆದುಕೊಂಡಿದೆ. ಕೆಲವೆಡೆಗಳಲ್ಲಿ ಪ್ರಾಯಶ: ಪರಭಾಷಾ ಪ್ರಭಾವವೂ ಈ ವೇಳೆಯಲ್ಲಿ ಕಂಡುಬರುತ್ತದೆ. ಛಂದೋಲಂಕಾರಗಳು ಜಾನಪದಗೀತೆಗಳ ಮೆರುಗನ್ನು ಮೆರೆಸುತ್ತ ನೂತನವಾಗಿವೆ, ವಿಲಕ್ಷಣವಾಗಿವೆ. ಅವು ಸ್ವಲ್ಪಮಟ್ಟಿಗೆ ಅದರ ಉಚ್ಚಾರಣೆಯ ರೀತಿಯನ್ನು ಪ್ರಭಾವಿಸಿವೆ. ತನ್ನ ಸರದಿಯಲ್ಲಿ ಅಪಭ್ರಂಶವೂ ಸಂಸ್ಕøತ ಮತ್ತು ಪ್ರಾಕೃತವಾಗಿಯೇ ಒಂದು ಸ್ಥಿರ ರೂಪಕವನ್ನು ಮುಟ್ಟಿತು. ಈ ಸಂದರ್ಭದಲ್ಲಿ ಆಧುನಿಕ ಭಾರತೀಯ ಭಾಷೆಗಳೆಂದು ನಾವೇನೆನ್ನುತ್ತೇವೊ ಆ ಭಾಷೆಗಳು ಹುಟ್ಟಿಕೊಂಡವು. ಇಂಡೋ ಆರ್ಯನ್ನಿನ ಮಧ್ಯಘಟ್ಟವನ್ನು ಪ್ರಾಕೃತಗಳೂ ಅಪಭ್ರಂಶವೂ ಪ್ರತಿನಿಧಿಸುತ್ತವೆ. ಪ್ರಾಕೃತಗಳ ಪೈಕಿ ಮಹಾರಾಷ್ಟ್ರೀ ಮತ್ತು ಅಪಭ್ರಂಶಗಳನ್ನು ಮೊದಲು ಸಾಮಾನ್ಯಜನರು ತಮ್ಮ ಹಾಡುಗಳಿಗೂ ದ್ವಿಪದಿಗಳಿಗೂ ಬಳಸಿಕೊಂಡು ಬೆಳಸಿದರೆಂದು ತೋರುತ್ತದೆ. ಆ ಮೂಲಗಳಿಂದ ಅವು ವಿದ್ವಾಂಸರ ಗಮನಕ್ಕೆ ಬಂದು ತನ್ಮೂಲಕ ಸಾಹಿತ್ಯಕ್ಕೆ ಪ್ರವೇಶಿಸಿದವು. ಮೃಚ್ಛಕಟಿಕದಲ್ಲಿ ಶೂದ್ರಕ ಮಹಾರಾಷ್ಟ್ರೀ ಪದ್ಯಗಳಿಗೆ ಅವಕಾಶ ಕೊಟ್ಟಿದ್ದಾನೆ. ಕಾಳಿದಾಸ (ಕ್ರಿ.ಶ. 400) ತನ್ನ ವಿಕ್ರಮೋರ್ವಶೀಯದಲ್ಲಿ ಅಪಭ್ರಂಶದ ಗೀತಗಳನ್ನು ಅಳವಡಿಸಿದ್ದಾನೆ. ವಿದ್ಯಾಪತಿ (ಕ್ರಿ.ಶ. 1400) ತನ್ನ ಸಂಸ್ಕøತ-ಪ್ರಾಕೃತ ನಾಟಕಗಳಲ್ಲಿ ಮೈಥಿಲೀ ಗೀತಗಳನ್ನು ಉಪಯೋಗಿಸುತ್ತಾನೆ. ಆಧುನಿಕ ಇಂಡೋ ಆರ್ಯನ್ ಭಾಷೆಗಳು ಜನಸಾಮಾನ್ಯರ ನಿತ್ಯವ್ಯವಹಾರಕ್ಕೆ ಒದಗುವಂಥ ಘಟ್ಟವನ್ನು ಮುಟ್ಟಿದ ಮೇಲೆಯೂ ಸಾಹಿತ್ಯವನ್ನೂ ವ್ಯಾಕರಣವನ್ನೂ ಅಭ್ಯಾಸ ಮಾಡಿದ ಬಳಿಕವೆ ಬರಹಕ್ಕೆ ತೊಡಗಬೇಕಿನಿಸುವ ವಿದ್ವತ್ ಭಾಷೆಗಳಾದ ಸಂಸ್ಕøತ ಪ್ರಾಕೃತಗಳ ಮತ್ತು ಅಪಭ್ರಂಶಗಳ ಕೃಷಿ ಭಾರತದಲ್ಲಿ ನಡೆಯುತ್ತಲೆ ಇದ್ದಿತು.

	ಪ್ರಾಕೃತಗಳ ಅಥವಾ ಮಧ್ಯ ಇಂಡೋ ಆರ್ಯನ್ನಿನ ಭಾಷಾ ಸ್ವರೂಪದ ವಿಷಯದಲ್ಲಿ ಸಂಸ್ಕøತಕ್ಕಿಂತಲೂ ಭಿನ್ನವಾದ ಕೆಲವು ಸ್ಥೂಲ ರೂಪರೇಖೆಗಳನ್ನು ಈಗ ನಿರೂಪಿಸಬಹುದು. ಶಬ್ದಕೋಶಗಳಲ್ಲಿ ಕೆಲವು ಶಬ್ದಗಳ ಉಚ್ಚಾರಣೆಯನ್ನು ಮಾರ್ಪಡಿಸಿಕೊಳ್ಳುವುದರಿಂದಾಗಿವೆ. ಅವುಗಳಲ್ಲಿ ಬಹುಭಾಗ ಪ್ರೌಢ ಕಾವ್ಯಗಳ ಸಂಸ್ಕøತದ ಮೂಲಕ್ಕೆ ಹೊರತಾದವು. ಪ್ರಾಯಶಃ ದೇಶ್ಯ ಶಬ್ದ ಮಾಲಿಕೆಯಿಂದ ತಂದುಕೊಂಡಂಥವು. ಉಚ್ಚಾರಣೆಯಲ್ಲಿ ಋ, ಐ. ಓ ಇತ್ಯಾದಿ ಸ್ವರಗಳು ಲೋಪವಾಗಿವೆ. ಮೂರು ಊಷ್ಮ ಧ್ವನಿಗಳನ್ನು ಒಂದಕ್ಕಿಳಿಸಿರುವುದು ಗೋಚರವಾಗುತ್ತದೆ. ಸಂಯುಕ್ತ ವರ್ಣಗಳ ಹಿಂದಿರುವ ದೀರ್ಘಸ್ವರ ಹ್ರಸ್ವವಾಗುತ್ತದೆ. ಎಲ್ಲ ಶಬ್ದಗಳೂ ಸ್ವರಾಂತವಾಗಿವೆ ಮತ್ತು ಸಾಮಾನ್ಯವಾಗಿ ಸಂಯುಕ್ತ ವ್ಯಂಜನಗಳಿಗಿಂತ ದ್ವಿತ್ವ ವ್ಯಂಜನಗಳ ಗುಚ್ಛವೇ ಅಧಿಕ. ವಿಭಕ್ತಿಗಳನ್ನು ನಡೆಸುವುದರಲ್ಲಿ ದ್ವಿವಚನ ಕಣ್ಮರೆಯಾಗಿದೆ. ಪಷ್ಠೀ ವಿಭಕ್ತಿಯ ವ್ಯಾಪ್ತಿ ಹೆಚ್ಚು, ಕೆಲವು ವಿಭಕ್ತಿಗಳ ಬಹುವಚನ ರೂಪ ಪಡಿಯಚ್ಚಾಗುತ್ತಿರುವುದು ಕಂಡುಬರುತ್ತದೆ. ಧಾತುರೂಪಗಳನ್ನು ನಡೆಸುವುದರಲ್ಲಿ ಇನ್ನಷ್ಟು ಖಿಲ ಭಾಗ ಕಂಡುಬರುತ್ತದೆ. ಕ್ರಿಯಾಪದಗಳು ಆ ಅಂತವಾಗಿಯೊ ಇಲ್ಲ ಈ ಅಂತವಾಗಿಯೊ ಇರುವ ನಮೂನೆಗಳನ್ನು ತೋರುತ್ತವೆ. ನ್ಯೂನ, ಅಸಮಗ್ರ, ಅನಿಶ್ಚಿತ ಭೂತಕಾಲಗಳನ್ನು ಸೂಚಿಸುವ ವೈಲಕ್ಷಣ್ಯಗಳು ಬಹುವಾಗಿ ಕಣ್ಮರೆಯಾಗಿವೆ. ಭೂತಕೃದಂತ ಎದ್ದು ಕಾಣುತ್ತದೆ. ಧಾತುರೂಪಗಳಲ್ಲಿ, ವರ್ತಮಾನ, ವಿಧಿ, ಭವಿಷ್ಯ ಮತ್ತು ಇಚ್ಛಾರ್ಥಕ ರೂಪಗಳೇ ಸಾಧಾರಣವಾಗಿ ಬಳಕೆಯಲ್ಲಿರತಕ್ಕವು. ಇಲ್ಲಿ ಕೂಡ ಧಾತುರೂಪಗಳು ಸ್ವಲ್ಪಮಟ್ಟಿಗೆ ಸಂದಿಗ್ಧವಾಗಿಯೆ ಇರುವುದು ಕಂಡುಬರುತ್ತದೆ. ಸೆಳವು ಇರುವುದು ಸರಳತೆಯತ್ತ ಅಥವಾ ಒಂದೇ ರೂಪವನ್ನು ಅನೇಕ ಉದ್ದೇಶಗಳಿಗೆ ಹುದುವಾಗಿ ಮಾಡಿಕೊಳ್ಳುವತ್ತ.

	ಪ್ರಾಚೀನ ಹಾಗೂ ಮಧ್ಯಯುಗದ ಭಾರತೀಯ ಸಾಹಿತ್ಯ ಸಂಪತ್ತಿನ ಸಮಗ್ರ ನೋಟವನ್ನು ಕಾಣಬೇಕಾದರೆ ಸಂಸ್ಕøತ ಪಾಲಿ ಮತ್ತು ಪ್ರಾಕೃತ (ಅಪಭ್ರಂಶ) ಸಾಹಿತ್ಯಗಳ ಸ್ಥೂಲವಾದ ಪರಿಚಯ ಅವಶ್ಯಕ. ಮೊದಲೆರಡನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳಲಾಗಿದೆ. ಮತ್ತು ಇಲ್ಲಿ ಪ್ರಾಕೃತ ಸಾಹಿತ್ಯದ ಪ್ರಧಾನವಾದ ಹೆಗ್ಗುರುತುಗಳನ್ನು ರೇಖಿಸಲು ಯತ್ನಿಸಿದೆ.

	2 ಪ್ರಾಕೃತ ಶಾಸನಗಳು ಮತ್ತು ನಾಟಕಗಳು : ಪ್ರಾಕೃತ ಶಾಸನಗಳಿಗೆ ಭಾಷೆ ಚರಿತ್ರೆಯ ದೃಷ್ಟಿಗಳಿಂದ ಪ್ರಾಮುಖ್ಯವುಂಟು. ಆದರೆ ಅವುಗಳಲ್ಲಿ ಕೆಲವು ತಮ್ಮ ರೂಪ ಮತ್ತು ಶೈಲಿ ಹಾಗೂ ಉದಾರವೂ ಶಾಶ್ವತವೂ ಆದ ಉಪದೇಶಗಳ ಸಲುವಾಗಿ ಸಾಹಿತ್ಯದ ನೆಲೆಗೇರಲು ಅರ್ಹವಾಗಿವೆ. ಮೌರ್ಯ ಸಾಮ್ರಾಜ್ಯ ರಾಜನೀತಿಯಲ್ಲಿ, ಸೈನ್ಯಶಕ್ತಿಯಲ್ಲಿ ಮತ್ತು ಸಾಂಸ್ಕøತಿಕ ಸಂಪತ್ತಿನಲ್ಲಿ ನಾಗರಿಕ ಲೋಕದ ಗ್ರೀಕರ ರಾಜ್ಯಗಳಿಗಿಂತ ಶ್ರೇಷ್ಠವಾಗಿತ್ತೆಂದು ಹೇಳಲಾಗದಿದ್ದರೂ ಸಮಾನವಂತೂ ಆಗಿಯೇ ಇತ್ತು. ಮೂವತ್ತಕ್ಕೂ ಹೆಚ್ಚಾಗಿರುವ ಅಶೋಕನ ಶಾಸನಗಳು ತಾವು ಹುಟ್ಟಿದ ಕಾಲವನ್ನು ನಮೂದಿಸಿರುವ ಭಾರತೀಯ ಸಾಹಿತ್ಯಕ ಲೇಖನಗಳಲ್ಲಿ ಪ್ರಾಚೀನತಮವೆನಿಸಿವೆ. ಅವನ್ನು ಬಂಡೆ, ಕಲ್ಲುಗುಂಡು ಕಂಬ ಮತ್ತು ಗವಿಗಳ ಗೋಡೆಗಳಲ್ಲಿ ಕೆತ್ತಿದ್ದಾರೆ. ಅವುಗಳಿರುವ ಸ್ಥಳಗಳು ರಾಜ್ಯದ ಗಡಿಗಳನ್ನೂ ಮುಖ್ಯ ಪಟ್ಟಣಗಳನ್ನೂ ಯಾತ್ರಾಸ್ಥಳಗಳನ್ನೂ ಗುರುತಿಸುತ್ತವೆ. ಏಳು ಪರಿಷ್ಕøತ ಪಾಠಗಳಲ್ಲಿರುವ ಹದಿನಾಲ್ಕು ಶಿಲಾ ಶಾಸನಗಳು, ಸಾಹಿತ್ಯದ ದೃಷ್ಟಿಯಿಂದ ಅಸಾಧಾರಣವಾದ ಒಂದು ವರ್ಗದವಾಗಿವೆ. ಅವು ಉದಾರವಾದ ರಾಜನೊಬ್ಬನ ಆಶ್ರಯದಲ್ಲಿರುವ ಕಾವ್ಯಜೀವಿ ಶುಷ್ಕಪಂಡಿತ ಸ್ತುತಿಪಾಠಕನ ಒಳ್ಳೆ ಒಕ್ಕಣೆಯ ಉದ್ಗಾರಗಳಲ್ಲ. ಅವುಗಳ ಶೈಲಿ ಸರಳ ಮಿತ ಮತ್ತು ಪ್ರಭಾವಯುತ. ಆ ಮನವಿಯೊ ಭಾವ ತುಂಬಿತುಳುಕುವಂತೆ ಎಷ್ಟು ನೆರವಾಗಿದೆಯೆಂದರೆ ಆ ಮಹಾತ್ಮನಾದ ಚಕ್ರವರ್ತಿ ತಾನೆ ಕಟ್ಟಕ್ಕರೆಯಿಂದ ತನ್ನ ಪ್ರಜೆಗಳನ್ನು ಕುರಿತಾಡುತ್ತಿದ್ದಾನೆ ಎಂಬಂತಿದೆ. ಅವು ಆ ರಾಜ್ಯದ ಒಳ್ಳೆಯ ಚಿತ್ರವನ್ನು ಕೊಡುವುವಲ್ಲದೆ ಅದರ ಅರಸನ ವ್ಯಕ್ತಿತ್ವವನ್ನೂ ಒಳ್ಳೆಯ ರಂಗಿನಲ್ಲಿ ಮೆರೆಸುತ್ತವೆ. ಆ ಚಕ್ರವರ್ತಿಯ ಹೇಳಿಕೆಗಳು, ಅವುಗಳಲ್ಲಿ ಮೂಡಿಬರುವ ಮರುಕ ಮತ್ತು ಸದ್ಭಾವನೆಗಳು ಅನ್ಯಾದೃಶವಾದವು. ತನ್ನ ದೊಡ್ಡ ರಾಜ್ಯದ ಹೊಣೆಯನ್ನು ಆತ ಸಂಪೂರ್ಣವಾಗಿ ಅರಿತವ. ತನ್ನ ಪ್ರಜೆಗಳ ದೈಹಿಕ ಮತ್ತು ಧಾರ್ಮಿಕ ಸಂಪದಭಿವೃದ್ಧಿಯಲ್ಲಿ ಅಲ್ಲದೆ ಸಮಸ್ತ ಜೀವಲೋಕದ ಯೋಗಕ್ಷೇಮದಲ್ಲೂ ಆತ ನಿರಂತರವಾಗಿ ಶ್ರಮಿಸುತ್ತಿದ್ದಾನೆ. ಬೌದ್ಧಧರ್ಮದಲ್ಲಿ ಆತನೊಲವು ಎದ್ದು ಕಾಣುವಂಥದು. ಆದರೆ ಆತ ಬೋಧಿಸಿದ ತತ್ತ್ವಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸುವಂಥವು. ದಯಾಪೂರ್ಣವಾದವು, ಸಾರ್ವತ್ರಿಕವಾದವು, ಸ್ಮಿತ್ ಮಹಾಶಯ ಹೇಳುವಂತೆ ಈ ಶಾಸನಗಳು ತಪಸ್ವಿಯ ಧರ್ಮನಿಷ್ಠೆಯೊಂದಿಗೆ ಆಳರಸನ ಜಾಣ್ಮೆಯನ್ನೂ ಹೊಂದಿಸಲು ಬಯಸಿದ, ತನ್ನ ಭಾವನೆಯಂತೆ ಭಾರತವನ್ನು ಧರ್ಮಿಷ್ಠ ರಾಜ್ಯವಾಗಿ ಮಾಡಲೆಳಸಿದ, ದೈವದ ಹೊಣೆಯನ್ನು ಅಡಳಿತವೇ ವಹಿಸಿಕೊಂಡು ಪ್ರಜೆಗಳನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರಿಸಿ ದಾರಿ ತೋರುತ್ತಿದ್ದ ದೇವರಿಲ್ಲದ ದೇವ ಪ್ರಭುತ್ವದ ದೇಶವಾಗಿ ಮಾಡಬೇಕೆಂದು ಹವಣಿಸಿದ ಪುರುಷ ಅಶೋಕ ಎಂದು ಸಾರುತ್ತವೆ. ಪ್ರತಿಯೊಬ್ಬ ಮನುಷ್ಯನೂ ತನ್ನ ಪುರುಷಾರ್ಥವನ್ನು ತಾನೆ ಸಾಧಿಸಿಕೊಳ್ಳಬೇಕು, ಮತ್ತು ತನ್ನ ಕರ್ಮಫಲವನ್ನು ತಾನೆ ಉಣ್ಣಬೇಕು ಎಂಬುದನ್ನು ಆತ ಸಮರ್ಥಿಸಿದ. “ಹಿರಿಯರಾಗಲಿ ಕಿರಿಯರಾಗಲಿ ಎಲ್ಲರೂ ಕಾರ್ಯತತ್ಪರರಾಗಲಿ” ಆಡಳಿತ ಪ್ರತಿಯೊಬ್ಬ ಮನುಷ್ಯ ತಾನು ನಡೆಯಬೇಕಾದ ದಾರಿಯನ್ನು ಮಾತ್ರ ತೋರಿಸಿಕೊಡುತ್ತದೆ. ಪೂಜ್ಯಭಾವ, ದಯೆ, ಸತ್ಯನಿಷ್ಠೆ, ಮತ್ತು ಸಹಾನುಭೂತಿ, ಇತ್ಯಾದಿ ಸದ್ಗುಣಗಳನ್ನು ಆತ ಮಂಡಿಸುತ್ತಿದ್ದ. ಪೂಜ್ಯಭಾವಹೀನತೆ, ಕಾರ್ಯ, ಅಸತ್ಯ ಮತ್ತು ಅಸಹನೆ ಇತ್ಯಾದಿ ದುರ್ಗುಣಗಳನ್ನು ಖಂಡಿಸುತ್ತಿದ್ದ. ಇಲ್ಲಿಯ ಬೋಧಕ ಉಪದೇಶಗಳ ಬರಿ ಬರಹಗಾರನಲ್ಲ. ಆತ ವ್ಯವಹಾರನಿಪುಣ. ಶಾಂತಿ ಮತ್ತು ಸಮರಕಲೆಗಳಲ್ಲಿ ಪರಿಣಿತ, ದೊಡ್ಡ ಸಾಮ್ರಾಜ್ಯವನ್ನು ಆಳಬಲ್ಲ ದಕ್ಷ, ಬಹುದೊಡ್ಡ ಮನುಷ್ಯ ಬಹುದೊಡ್ಡ ದೊರೆ, ಹದಿಮೂರನೆಯ ಶಿಲಾಶಾಸನ ಮಾನವನ ಇತಿಹಾಸದಲ್ಲೇ ಶ್ರೇಷ್ಠವಾದ ಬರೆಹವೆನ್ನಬೇಕು. ಕಳಿಂಗಯುದ್ಧದಲ್ಲಿ ಅಶೋಕ ನಿಸ್ಸಂದಿಗ್ಧವಾದ ಜಯವನ್ನು ಗಳಿಸಿದ್ದ ಆದರೆ ಈ ಮಹಾಸಮರ್ಥನಾದ ಚಕ್ರವರ್ತಿಯ ಮನಸ್ಸಿನಲ್ಲಿ ಅದು ಎಂಥ ಪರಿತಾಪವನ್ನು ಹುಟ್ಟಿಸಿತೆಂದರೆ ಆತ ತನ್ನ ಬೇಗುದಿಯನ್ನು ನೇರ ಮತ್ತು ಸ್ಪಷ್ಟವಾದ ಮಾತುಗಳಲ್ಲಿ ಹೇಳಿಕೊಳ್ಳುವಷ್ಟು. ಆಗ ಆತನ ಜೀವ ಒಂದು ತಿರುವನ್ನು ಪಡೆಯಿತು ಎನ್ನಬೇಕು. ಯುದ್ಧದ ರಾದ್ಧಾಂತದಲ್ಲೇ ಇನ್ನೂ ತೊಡಗಿಕೊಂಡಿರುವ ನಮಗೆ ಪ್ರಾಯಶಃ ಅಶೋಕನ ಆ ಮಾತುಗಳು ತುಂಬ ಅರ್ಥವತ್ತಾಗಿವೆ. ಅಶೋಕ ಬದಲಾಯಿಸಿದ ಆದರೆ ಮಾನವೀಯ ಚೇತನ ಮಾತ್ರ ಕಳೆದ ಎರಡು ಸಾವಿರಗಳ ಅಂತರದಲ್ಲಿ ಇನ್ನೂ ಅಧಃಪಾತಾಳಕ್ಕಿಳಿದಿದೆ.

	ಹಾಥಿಗುಂಫದಲ್ಲಿರುವ ಚೇಟಿವಂಶದ ಖಾರವೇಲನ ಶಾಸನ (ಕ್ರಿ.ಶ. ಒಂದನೆಯ ಅಥವಾ ಎರಡನೆಯ ಶತಮಾನದ್ದು) ಖಾರವೇಲನ ಮೊದಲ ಹದಿಮೂರು ವರ್ಷಗಳ ಆಳ್ವಿಕೆಯ ರೀತಿಯನ್ನು ರೇಖಿಸುತ್ತೆ. ಅದು ರೂಪುಗಟ್ಟಿದೆ. ಅಶೋಕನ ಲಿಖಿತಗಳಿಗಿಂತ ಇದರ ಮಾತಿನ ಓಟ ಚೆನ್ನಾಗಿದೆ. ಕಳಿಂಗದ ಪ್ರತಿಷ್ಠೆಯನ್ನು ಬಲಪಡಿಸಿ ಮತ್ತು ಬೆಳೆಸಿದ ಈ ಸಮರ್ಥ ರಾಜನ ವೈಯಕ್ತಿಕ ಜೀವನದ ವಿವರಗಳನ್ನು ಕೊಡುವುದರ ಜೊತೆಗೆ ಈ ಲೇಖ ಕ್ರಿ.ಶ. ಎರಡನೆಯ ಶತಮಾನದಲ್ಲಿ ಭಾರತೀಯ ರಾಜರ ಮಕ್ಕಳ ಬಾಲ್ಯಜೀವನದ ಮತ್ತು ಶಿಕ್ಷಣ ಕ್ರಮದ ಒಳ್ಳೆಯ ನೋಟವನ್ನು ಒದಗಿಸುತ್ತದೆ. ಪಶ್ಚಿಮ ಭಾರತ ಅನೇಕ ಶಾಸನಗಳಲ್ಲಿ, ಕ್ರಿ.ಶ. ಎರಡನೆಯ ಶತಮಾನದ ವಾಶಿಷ್ಠಿ ಪುತ್ರ ಪುಳುಮಾವಿಯ ನಾಸಿಕ ಗವಿಯ ಶಾಸನ ಇತಿಹಾಸ ಮತ್ತು ಪುರಾಣ ಕತೆಗಳಲ್ಲೂ ಮತದಲ್ಲೂ ನಿಷ್ಣಾತನಾದ ಆಸ್ಥಾನದ ಸ್ತುತಿ ಪಾಠಕನೊಬ್ಬನ ಮನಸ್ಸಿನ ಓಟವನ್ನು ತೋರಿಕೊಡುತ್ತದೆ; ಅಲ್ಲದೆ ಕಾವ್ಯ ಮತ್ತು ಚಂಪೂಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅಲಂಕಾರಿಕ ಶೈಲಿಯ ಮುಂಬರವನ್ನು ಸೂಚಿಸುತ್ತದೆ.

	ನಾಟಕ, ನಾಟಿಕಾ, ಪ್ರಕರಣ ಇತ್ಯಾದಿ ಮಾದರಿಗಳಲ್ಲಿರುವ ಭಾರತದ ಪ್ರಾಚೀನ ದೃಶ್ಯ ಕಾವ್ಯದಲ್ಲಿ, ಕೆಲವು ಪಾತ್ರಗಳು ಸಂಸ್ಕøತದಲ್ಲೂ ಮತ್ತೆ ಕೆಲವು ಪ್ರಾಕೃತದಲ್ಲೂ ಮಾತನಾಡುವಂತೆ ಅನುಗೊಳಿಸಲಾಗಿದೆ. ಆದ್ದರಿಂದ ಸಹಜವಾಗಿಯೇ ರೂಪಕವೊಂದರಲ್ಲಿ ಬರುವ ಪ್ರಾಕೃತ ವಾಕ್ಯಗಳನ್ನು, ಅನುಸ್ಯೂತವಾಗಿರುವ ಪ್ರಬಂಧವನ್ನು ಹೇಗೊ ಹಾಗೆ ವಿವೇಚಿಸಿ ಬೆಲೆಗಟ್ಟುವುದು ಕಷ್ಟ. ದೃಶ್ಯಕಾವ್ಯದ ತತ್ತ್ವವನ್ನು ಅವಲಂಬಿಸಿ ಅದರ ಸಂಪ್ರದಾಯಗಳಿಗೆ ಅನುಸಾರವಾಗಿ ಕಡಿಮೆಯಾಗಿಯೊ ಹೆಚ್ಚಾಗಿಯೊ ಒಂದು ಅಥವಾ ಒಂದಕ್ಕಿಂತಲೂ ಅಧಿಕವಾಗಿರುವ ಪ್ರಾಕೃತ ಉಪಭಾಷೆಗಳನ್ನು ನಾಟಕಕಾರರು ಉಪಯೋಗಿಸಿದ್ದಾರೆ. ಆದರೆ ಅವರ ಅನೇಕ ಕೃತಿಗಳಲ್ಲಿ ಜನಜೀವನದ ಅಂಶ ಬಹಳ ಸ್ವಲ್ಪ. ಮತ್ತು ಪ್ರಾಕೃತ ಉಪಭಾಷೆ ಸಂಸ್ಕøತದೊಂದಿಗೆ ಉಳಿದುಕೊಂಡಿದೆ. ಒಂದು ಸಲಕ್ಕಿಂತಲೂ ಹೆಚ್ಚಾಗಿ, ಪ್ರತಿ ಮಾಡುವ ಲಿಪಿಕಾರರು ಅದನ್ನು ಸರಿಪಡಿಸುವುದಕ್ಕೆ ಹವಣಿಸಿದ್ದಾರೆ. ಕಾಳಿದಾಸನಿಗಿಂತ ಪೂರ್ವದಲ್ಲಿ ಅಲ್ಲದಿದ್ದರೂ ಅವನ ತರುವಾಯವಾದರೂ ದೃಶ್ಯಕಾವ್ಯದಲ್ಲಿಯ ಪ್ರಾಕೃತ ವಾಕ್ಯ ಸಂತತಿಗಳು, ಮೊದಲು ಸಂಸ್ಕøತದಲ್ಲಿ ರೂಪಗೊಂಡ ವಾಕ್ಯವನ್ನು ಪ್ರಾಕೃತಕ್ಕಿಳಿಸಿದಂತೆ ತೋರಿ, ಕೃತಕವೂ ನೀರಸವೂ ಆದ ಮಾತಿಗೆ ಮಾದರಿಯೆನಿಸಿವೆ. ಅವನ್ನು ಉಪಯೋಗಿಸಬೇಕೆಂಬ ಸಂಪ್ರದಾಯ ಹಲವು ಶತಮಾನಗಳ ಪರ್ಯಂತ ಮತನಿಷ್ಠರ ಮನಸ್ಸಿಗೆ ತುಂಬ ಹತ್ತಿಕೊಂಡಿತ್ತು. ಇತ್ತೀಚೆಗೆ ತಾನೇ ದೃಶ್ಯಕಾವ್ಯದ ಮೇಲೆ ಪ್ರಾಕೃತ ತನ್ನ ಹಿಡಿತವನ್ನು ಸಡಲಿಸಿತೆನ್ನಬೇಕು. ಹನುಮನ್ನಾಟಕದ ಕರ್ತೃ (ಕ್ರಿ.ಶ. 1200ರ ಬಳಿಕ) ವಿಷ್ಣು ಭಕ್ತರ ಗೋಷ್ಠಿಗೆ ಸಂಸ್ಕøತ ಹೊರತು ಪ್ರಾಕೃತ ಭಾಷೆ ಯೋಗ್ಯವಲ್ಲವೆಂದು ನಿಸ್ಸಂಕೋಚವಾಗಿ ಹೇಳುತ್ತಾನೆ. ಪ್ರಾಕೃತವನ್ನು ಬಳಸುವ ದೃಶ್ಯಕಾವ್ಯಗಳ ಸಂಖ್ಯೆ ಹೆಚ್ಚೆಂದೇ ಹೇಳಬೇಕು. ಪ್ರಾಕೃತ ಉಪಭಾಷೆಗಳನ್ನಾಡುವ ಕೆಲವು ಪಾತ್ರಗಳ ವಿಷಯದಲ್ಲಿ ನಮಗೆ ವಿಲಕ್ಷಣವಾದ ಆಸಕ್ತಿ ಹುಟ್ಟುತ್ತದೆ. ಪ್ರಾಕೃತ ಭಾವಗೀತೆಯನ್ನು ಶೂದ್ರಕ ಕಾಳಿದಾಸ ವಿಶಾಖದತ್ತ ಮತ್ತು ಇತರರು ತುಂಬ ಇಷ್ಟಪಟ್ಟು ರಚಿಸಿದ್ದಾರೆ. ಅವರ ಕೆಲವು ಗಾಥೆಗಳು ಕೋಮಲಭಾವಗಳನ್ನು ನಿರೂಪಿಸುವ ನೈಜ ಕವಿತ್ವದ ತುಣುಕುಗಳು, ಶೂದ್ರಕ ಮತ್ತು ಇತರರ ಕೈಯಲ್ಲಿ ಆಡಂಬರವಿಲ್ಲದ ಸಂಭಾಷಣೆಗೆ ಪ್ರಾಕೃತ ಒಳ್ಳೆಯ ಮಾಧ್ಯಮವೆನಿಸಿದೆ. ಬೇರೆ ಬೇರೆ ನಾಟಕಗಳಲ್ಲಿ ವಿದೂಷಕನ ಶೌರಸೇನಿ ಮಾತುಗಳಲ್ಲಿ ಕೃತ್ರಿಮವಿಲ್ಲದ ಸಂಚುಗಾರಿಕೆ, ಹಗುರವಾದ ಹಾಸ್ಯ, ಕಟುವಲ್ಲದ ಕಟಕಿ ಮಾತು-ಇವನ್ನು ಕಾಣಬಹುದು. ಮೃಚ್ಛಕಟಿಕದಲ್ಲಿ ಅವನು ಮಾಡುವ ವಸಂತಸೇನೆಯ ಭವನದ ವರ್ಣನೆ ಸಹಜವೆನಿಸದೆ ಪಾಂಡಿತ್ಯಪೂರ್ಣವೆನಿಸುತ್ತದೆ. ಶೂದ್ರಕನ ಶಕಾರ ಮಾತ್ರ ಒಂದು ವಿಲಕ್ಷಣ ಪಾತ್ರ. ಅದನ್ನು ಮೀರಿಸಿದ್ದು ಮತ್ತೊಂದಿಲ್ಲ. ಮಾಗಧಿಯಲ್ಲಿ ಅವನು ಹಾಡುವ ಹಾಡುಗಳೂ ಹೇಳುವ ಮಾತುಗಳೂ ಅವುಗಳ ಶ್ಲೇಷೆಗೂ ಹಾಸ್ಯಕ್ಕೂ ತುಂಬ ಪ್ರಸಿದ್ಧವಾಗಿವೆ. ವೇಣೀಸಂಹಾರ ನಾಟಕದಲ್ಲಿ ಬರುವ ರಾಕ್ಷಸ ಮತ್ತು ಅವನ ಹೆಂಡತಿ ಮಾಗಧಿಯಲ್ಲಿ ಯುದ್ಧರಂಗದ ವರ್ಣನೆ ಮಾಡುತ್ತಾರೆ. ಆದರೆ ದೃಶ್ಯಕಾವ್ಯದಲ್ಲಿಯ ಪ್ರಾಕೃತಗಳ ಶೈಲಿಯ ಹುರುಳು ಸಂಸ್ಕøತದ್ದು. ದೇಶಿಯಾಂಶಗಳಿಗೆ ಅಲ್ಲಿ ಸರಾಗವಾದ ಪ್ರವೇಶವಿಲ್ಲ.

	ಕೆಲವು ವಿದ್ವಾಂಸರ ಮತದಲ್ಲಿ ಜನಕ್ಕೆ ಬೇಕಾದ ನೃತ್ಯ. ಸಂಗೀತ ಮತ್ತು ಸಂಭಾಷಣೆಗಳಿಂದ ಕೂಡಿದ ಭಾರತೀಯ ದೃಶ್ಯಕಾವ್ಯ ಮೊದಲು ಪ್ರಾಕೃತದಲ್ಲೇ ಇತ್ತು. ಸಂಸ್ಕøತದಲ್ಲಿಗೆ ಪ್ರವೇಶಿಸಿದ್ದು ಇತ್ತೀಚೆಗೆ. ಈ ಅಭಿಪ್ರಾಯವನ್ನು ದೃಶ್ಯಕಾವ್ಯಗಳ ಮೇಲಿನ ಪ್ರಾಚೀನ ನಿಬಂಧನಗಳಾಗಲಿ ಉಪಲಬ್ಧವಾಗಿರುವ ಪ್ರಾಚೀನತಮ ನಾಟಕಗಳ ಮಾದರಿಗಳಾಗಲಿ ಸಮರ್ಥಿಸುವುದಿಲ್ಲ. ಸಂಸ್ಕøತ ಮತ್ತು ಪ್ರಾಕೃತಗಳು ಜೊತೆಜೊತೆಯಾಗಿರುವುದನ್ನು ಅವು ಒಪ್ಪುತ್ತವೆ. ಆದರೆ, ಸಂಪೂರ್ಣವಾಗಿ ಪ್ರಾಕೃತದಲ್ಲೆ ನಿರ್ಮಿತವಾಗಿರುವ ಸಟ್ಟಕವೆಂಬ ಮಾದರಿಯ ದೃಶ್ಯಕಾವ್ಯವೊಂದುಂಟು. ಅದು ನಾಟಿಕೆಯನ್ನು ಅನೇಕ ಅಂಶಗಳಲ್ಲಿ ಹೋಲುತ್ತದೆ. ಸಟ್ಟಕ ಅಥವಾ ಸಾಡಿಕಾ ಎಂಬ ಮಾತು ತುಂಬ ಹಳೆಯದು. ಆದರೆ ಸಟ್ಟಕದ ಮಾದರಿಗಳು ಇತ್ತೀಚಿನವು. ಅವುಗಳ ಸಂಖ್ಯೆಯೂ ಸ್ವಲ್ಪ. ರಾಜಶೇಖರನ (ಸುಮಾರು ಕ್ರಿ.ಶ. 900) ಕರ್ಪೂರ ಮಂಜರಿ ಎಂಬುದೊಂದು ಕಳ್ಳೊಲುಮೆಯ ಕತೆ. ಹಿರಿಯ ರಾಣಿಯ ತಂಗಿಯಾದ ಕರ್ಪೂರಮಂಜರಿಯನ್ನು ಭೈರವಾನಂದನೆಂಬ ಯಕ್ಷಿಣಿಯವನು ಅದ್ಭುತ ಸಾಧನೆಯೊಂದರಿಂದ ಅರಮನೆಗೆ ಕೊಂಡೊಯ್ಯುತ್ತಾನೆ, ಅಲ್ಲಿ ಅರಸ ಚಂಡಪಾಲನಿಗೂ ಆಕೆಗೂ ವಿವಾಹ ನಡೆದು ಕತೆ ಶುಭದಲ್ಲಿ ಮುಗಿಯುತ್ತದೆ. ಭಾರತೀಯ ಸಾಹಿತ್ಯದಲ್ಲಿ ಸುಖಾಂತವಾದ ಲಲಿತ ನಾಟಕಗಳ ಪೈಕಿ ಇದು ಶ್ರೇಷ್ಠತಮವೆಂದು ಪರಿಗಣಿತವಾಗಿದ್ದರೂ ಇದರ ವೈಲಕ್ಷಣ್ಯ ಶೈಲಿ ಮತ್ತು ಭಾಷೆಗಳಲ್ಲಿದೆಯೆ ಹೊರತು ಹಳೆಯ ಪಡಿಯಚ್ಚಿನಲ್ಲಿ ಮೂಡಿಬಂದಿರುವ ಕಥಾವಸ್ತುವಿನಲ್ಲಾಗಲಿ ಪಾತ್ರಗಳಲ್ಲಾಗಲಿ ಅಷ್ಟಾಗಿ ಇಲ್ಲ.

	ಭಾಷಾ ಪ್ರಯೋಗದಲ್ಲೂ ಛಂದಸ್ಮ್ಸಗಳ ನಿರ್ಮಾಣದಲ್ಲೂ ರಾಜಶೇಖರ ನಿಷ್ಣಾತ. ಸಂದರ್ಭಕ್ಕೆ ತಕ್ಕಂತೆ ಅವನಿಗೆ ಶಬ್ದಗಳು ಒದಗಿಬರುತ್ತವೆ. ಅವಕ್ಕೆ ಲಯಬದ್ದವಾದ ಶ್ರುತಿಸುಖ ನಾದವುಂಟು, ನಿರರ್ಗಳವಾದ ಹರಿವುಂಟು. ಆತನ ಪ್ರಕೃತಿ ವರ್ಣನೆಗಳು ವರ್ಣರಂಜಿತವಾಗಿವೆ; ನಾಜೂಕಾಗಿವೆ. ಅವನ ಗಾದೆಗಳು ಮನೆ ಮಾತಿನ ಸರಣಿಗಳು. ಅಲ್ಲಿನ ನಡೆವಳಿಕೆಗಳನ್ನು ಕುರಿತಾಡುವ ನುಡಿ ಮೊದಲಾದವು ವಿಶೇಷ ಗಮನಕ್ಕೆ ತಕ್ಕವು. ಕನೂಜಿನ ಮಹೇಂದ್ರಪಾಲ ಮತ್ತು ಆತನ ತರುವಾಯ ಪಟ್ಟಕ್ಕೆ ಬಂದ ರಾಜನ ಆಶ್ರಯ ಈತನಿಗೆ ದೊರೆಯಿತು. ಮತ್ತು ಈ ನಾಟಕವನ್ನು ಆಡಿಸುವುದಕ್ಕೆ ಪ್ರೇರಕಳಾದವಳು ಬೌಹಾಣವಂಶದ ಸುಸಂಸ್ಕøತ ಆವಂತೀಸುಂದರಿ, ತನ್ನ ಸ್ವಂತ ಹೆಂಡತಿ. ಕಾಲಿಕಟ್ಟಿನ ಜಾಮೊರಿನ್ನಿನ (ಕ್ರಿ.ಶ. ಹದಿನೇಳನೆಯ ಶತಮಾನ) ಆಶ್ರಿತವಾದ ಚಂದ್ರಲೇಖಾ ಸಟ್ಟಕವನ್ನು ಬರೆದ; ಇದರ ಕಥಾವಸ್ತು ಮಾನವೇದ ಮತ್ತು ಚಂದ್ರಲೇಖರ ವಿವಾಹ. ಅವನ ಶೈಲಿ ಶಕ್ತಿಯುತವಾಗಿದೆ, ಆದರೆ ಕ್ಲಿಷ್ಟವಾದ ದೀರ್ಘಸಮಾಸಗಳು ಅನೇಕ ವೇಳೆ ತಲೆದೋರುತ್ತವೆ. ತಂಜಾವೂರಿನ ತುಕ್ಕೋಜಿ ಮಹಾರಾಜನ ಆಸ್ಥಾನ ಕವಿಯಾದ ಘನಶ್ಯಾಮ (ಕ್ರಿ.ಶ. ಹದಿನೆಂಟನೆಯ ಶತಮಾನದ ಮಧ್ಯಭಾಗ) ಆನಂದಸುಂದರಿ ಸಟ್ಟಕವನ್ನು ಬರೆದ. ವಾರಾಣಸಿಯ ಚೈತ್ರಸಿಂಹನೆಂಬ ದೊರೆ ಮತ್ತು ಗುಜರಾತಿನ ಮದನವರ್ಮನ ಮಗಳು ರಂಭೆ ಇವರ ಕಥೆಯನ್ನು ಕುರಿತ ನಯಚಂದ್ರನ (ಕ್ರಿ.ಶ. ಹದಿನೆಂಟನೆಯ ಶತಮಾನ) ರಂಭಾಮಂಜರಿ ಎಂಬುದು ಕೂಡ ಸಟ್ಟಕವೇ. ಆದರೆ ಅದು ಪ್ರಾಕೃತವನ್ನಲ್ಲದೆ ಸಂಸ್ಕøತವನ್ನು ಬಳಸುತ್ತದೆ. ಕರ್ಪೂರಮಂಜರಿ ಮುಂದಿನ ಸಟ್ಟಕಗಳಿಗೆಲ್ಲ ಸ್ಛೂರ್ತಿದಾಯಕ ಮಾದರಿಯೆನಿಸಿದೆ.

	3 ಜೈನಧರ್ಮ, ಧರ್ಮಕ್ಕೆ ಮೊದಲಿನ ಮತ್ತು ಮುಂದಣ ಕೃತಿಗಳು : ಜೈನಾಗಮ ಗ್ರಂಥಗಳು ಪ್ರಾಕೃತ ಸಾಹಿತ್ಯದ ಒಂದು ಪ್ರಮುಖಾಂಶವಾಗಿದೆ. ಜೈನಮತ ಈ ಯುಗದಲ್ಲಿ ಕಾಲಾನುಕಾಲಕ್ಕೆ ಧರ್ಮಪ್ರಚಾರದ ಹೊಣೆಯನ್ನು ಹೊತ್ತಿರುವ ಇಪ್ಪತ್ತು ನಾಲ್ಕು ತೀರ್ಥಂಕರರನ್ನು ಅಂಗೀಕರಿಸುತ್ತದೆ. ಕೃಷ್ಣನ ದಾಯಾದಿಯಾದ ನೇಮಿನಾಥ ಅವರಲ್ಲಿ ಇಪ್ಪತ್ತೆರಡನೆಯವ. ಇಪ್ಪತ್ತಮೂರನೆಯವ ಪಾಶ್ರ್ವನಾಥ. ಈತ ಇತಿಹಾಸ ಪುರುಷನೆಂಬುದನ್ನು ಈಗ ಒಪ್ಪಿಕೊಳ್ಳಲಾಗಿದೆ. ನಿಗಠನಾಟಿಪುತ್ತನೆಂದು ಬೌದ್ದ ಗ್ರಂಥಗಳು ಯಾವಾತನನ್ನು ಹೇಳುತ್ತವೊ ಆತ ತೀರ್ಥಂಕರರಲ್ಲಿ ಕೊನೆಯವನಾದ ಮಹಾವೀರ (ಕ್ರಿ.ಪೂ. 599-527). ಆತ ಬುದ್ದನ ಸಮಕಾಲೀನ ಮತ್ತು ಆತನಿಗಿಂತ ಹಿರಿಯವ. ಆತನಂತೆ ರಾಜವಂಶದವ, ಮಗಧ ರಾಜವಂಶದ ಬಳಗಕ್ಕೆ ಸೇರಿದವ ಭಾರತದಲ್ಲಿ ಧಾರ್ಮಿಕ ಜ್ಞಾನ ಸಂಪತ್ತೆಲ್ಲ ಗುರುವಿನಿಂದ ಶಿಷ್ಯನಿಗೆ ಬಾಯಿಪಾಠದ ಮೂಲಕ ತಲೆಯಿಂದ ತಲೆಮಾರಿಗೆ ಲಭ್ಯವಾಗುತ್ತಿತ್ತಷ್ಟೆ. ಮಹಾವೀರನ ಮತ್ತು ಆತನ ಶಿಷ್ಯರ ಉಪದೇಶಗಳು ಅರ್ಧಮಾಗಧಿಯಲ್ಲಿರುವ ಜೈನಾಗಮದ ಮೂಲಕ ನಮಗೆ ದೊರೆತಿವೆ. ಹೀಗೆ ಅವು ತಲೆಯಿಂದ ತಲೆಮಾರಿಗೆ ಇಳಿದುಬರುವಲ್ಲಿ ಅನೇಕ ಕಷ್ಟಕಾರ್ಪಣ್ಯಗಳಿಗೆ ಒಳಗಾಗಿವೆ. ದುಷ್ಕಾಲಗಳ ಪ್ರಯುಕ್ತ, ಅದರಲ್ಲೂ ಕ್ಷಾಮವೊಂದು ತಲೆದೋರಿದುದ್ದರಿಂದ ಸುಮಾರು ನಾಲ್ಕನೆ ಶತಮಾನದಲ್ಲಿ ಪಾಟಲೀಪುತ್ರದಲ್ಲಿ ನೆರೆದ ಪಂಡಿತ ಮಂಡಲಿ ಅವನ್ನು ಒಂದು ಕ್ರಮಕ್ಕೆ ತರುವ ಏರ್ಪಾಡನ್ನು ಕೈಕೊಳ್ಳುವ ಅವಶ್ಯಕತೆಯುಂಟಾಯಿತು. ಇದಾದ ತರುವಾಯ ಕಾಲಾನುಕಾಲಕ್ಕೆ ಸ್ಕಂಡಿಲ, ನಾಗಾರ್ಜುನ ಮತ್ತು ದೇವದ್ರ್ಧಿ ಇತ್ಯಾದಿ ಶ್ರೇಷ್ಠ ವಿದ್ವಾಂಸರು ಇಂಥ ಪ್ರಯತ್ನಗಳನ್ನು ಕೈಗೊಂಡರು. ವ್ಯಕ್ತಿಗಳ ಸ್ವಂತ ಕೃತಿಗಳೆನಿಸಿದ ಕೆಲವು ಗ್ರಂಥಗಳೂ ಇವೆ. ಕ್ರಿ.ಶ. ಐದನೆಯ ಶತಮಾನದ ಮಧ್ಯದಲ್ಲಿ ದೇವದ್ರ್ಧಿಯ ಮುಂದಾಳುತನದಲ್ಲಿ ವಲ್ಲಭೀ ಪಂಡಿತ ಮಂಡಲಿ ಈ ಆಗಮವನ್ನು, ಅದು ಈಗ ನಮಗೆ ಉಪಲಬ್ಧವಾಗಿರುವಂತೆ ಕ್ರಮಪಡಿಸಿ, ಪುನವ್ರ್ಯವಸ್ಥೆಗೊಳಿಸಿ, ಪರಿಷ್ಕರಿಸಿ, ಬರೆಹಕ್ಕೆ ಇಳಿಸಿತು. ಇದಕ್ಕಿಂತ ಹಿಂದಿನ ಆಗಮ ಪಾಠಗಳ ಪಟ್ಟಿಗಳು, ಪ್ರಾಯಶಃ ಹಿಂದಿನ ಸಂಕಲನಗಳಲ್ಲಿ ವರ್ಗೀಕೃತವಾಗಿರುವಂತೆ, ಈ ಆಗಮದಲ್ಲಿಯೆ ನಮಗಾಗಿ ಸಂರಕ್ಷಿತವಾಗಿವೆ. ಅತ್ಯಂತ ಪುರಸ್ಕøತವಾದ, ಪ್ರಾಯಶಃ ವಲ್ಲಭಿಯ ಪಂಡಿತ ಮಂಡಲಿಯಿಂದಲೆ ಇರಬಹುದು, ವಿಂಗಡಿಕೆ ಯಾವುದೆಂದರೆ, ಆಗಮದಲ್ಲಿ ಆಚಾರಂಗ ಸೂತ್ರಕೃತಾಂಗ ಮುಂತಾದ ಹನ್ನೊಂದು ಅಂಗಗಳು; ಔಪಪತಿಕ, ರಾಜಪ್ರಶ್ನೀಯ ಇತ್ಯಾದಿ ಹನ್ನೆರಡು ಉಪಾಂಗಗಳು. ಚತುಶ್ಚರಣ, ಆತುರಪ್ರತ್ಯಾಖ್ಯಾನ ಮುಂತಾದ ಹತ್ತು ಪ್ರಕೀರ್ಣಗಳು, ನಿಶೀಥ, ಮಹಾನಿಶೀಥ ಇತ್ಯಾದಿ ಆರು ಜೇಡಸೂತ್ರಗಳು, ನಾಂದೀ ಮತ್ತು ಅಣುಯೋಗ ದ್ವಾರಗಳೆಂಬ ಎರಡು ವೈಯಕ್ತಿಕ ಗ್ರಂಥಗಳು, ಉತ್ತರಾಧ್ಯಯನ, ಅವಶ್ಯಕ, ದಶವೈಕಾಲಿಕ ಮೊದಲಾದ ನಾಲ್ಕು ಮೂಲ ಸೂತ್ರಗಳು. ಹದಿನಾಲ್ಕು ಪೂರ್ವಗಳನ್ನು ಒಳಗೊಂಡ ದೃಷ್ಟಿವಾದವೆಂಬ ಹನ್ನೆರಡನೆಯ ಅಂಗ ಈಗ ನಷ್ಟವಾಗಿದೆ. ಆಗಮದಲ್ಲಿಯ ವಿಷಯಗಳು ವಿಧವಿಧವಾಗಿವೆ. ಅಂದಿನ ಕಾಲದಲ್ಲಿ ಮನುಷ್ಯನ ಬುದ್ದಿಗೆ ಎಟಕಿರುವ ಜ್ಞಾನದ ಪ್ರತಿಯೊಂದು ಶಾಖೆಗೂ ಅದು ಆಕರವಾಗಿದೆ. ಆಚಾರಂಗ ದಶವೈಕಾಲಿಕ ಮೊದಲಾದ ಗ್ರಂಥಗಳು ಮಹಾವೀರನ ಕಾಲದಲ್ಲಿ ಪೂರ್ವಭಾರತದಲ್ಲಿ ಬಳಕೆಯಲ್ಲಿದ್ದ ರಾಜತ್ವದ ವರ್ಣನೆಗಳನ್ನು ಒಳಗೊಂಡಿವೆ. ಜೀವಾಭಿಗಮ ಮುಂತಾದವು ಜೀವವುಳ್ಳ ಪ್ರಾಣಿಗಳ ವಿಷಯದಲ್ಲಿ ಜೈನರ ಭರವಸೆ ಎಂಥದೆಂಬುದನ್ನು ಸಮಗ್ರವಾಗಿ ಚರ್ಚಿಸುತ್ತವೆ. ಉಪಾಸಕದಶಾಃ, ಪ್ರಶ್ನವ್ಯಾಕರಣಾನಿ ಮುಂತಾದವು ಗೃಹಸ್ಥನ ಧ್ಯೇಯಗಳನ್ನೂ ಅವನು ಪಾಲಿಸಬೇಕಾದ ನಿಯಮಗಳನ್ನೂ ನಿರೂಪಿಸುತ್ತವೆ. ಜ್ಞಾತಾಧರ್ಮಕಥಾಃ, ವಿಪಾಕಶುತ ಮತ್ತು ನಿರಯಾವಲಿಯಾ ಓ ಎಂಬವು ತಮ್ಮೆಲ್ಲ ಪ್ರಕಾರಗಳಲ್ಲೂ ನೀತಿಯನ್ನೇ ಬೋಧಿಸುವ ಪಾವನ ಕಥೆಗಳನ್ನು ಹೇಳುತ್ತವೆ. ಉಪದೇಶವೇ ಅವುಗಳ ಉದ್ದೇಶ. ಸೂರ್ಯಪ್ರಜ್ಞಪ್ತಿ ಮುಂತಾದವು ಜೈನಾಗಮದಲ್ಲಿಯ ಸೃಷ್ಟಿಕ್ರಮವನ್ನು ವರ್ಣಿಸುತ್ತವೆ. ಸೂತ್ರಕೃತಾಂಗ, ಉತ್ತರಾಧ್ಯಯನ ಇತ್ಯಾದಿಗಳು ಒಳ್ಳೆ ಹೊಳಪುಳ್ಳ ನೀತಿಬೋಧೆಗಳನ್ನೂ ದಾರ್ಶನಿಕ ಪ್ರಸಂಗಗಳನ್ನೂ ವಿನೋದವುಳ್ಳ ಅಖ್ಯಾಯಿಕೆಗಳನ್ನೂ ಒಳಗೊಂಡಿವೆ. ಹಾಗೂ ಅವುಗಳ ಕೆಲವು ಪ್ರಕರಣಗಳು ಪ್ರಾಚೀನ ಭಾರತದ ವಿರಕ್ತರ ಕಾವ್ಯದ ಒಳ್ಳೆಯ ಮಾದರಿಗಳಾಗಿವೆ. ನಂದೀ ಎಂಬುವ ಜೈನದರ್ಶನದ ಪ್ರಮಾಣ ಪ್ರಮೇಯಗಳ ವಿವೇಚನೆಯನ್ನು ವಿವರವಾಗಿ ಮಾಡಿದ್ದಾನೆ. ಭಗವತೀ ಮುಂತಾದ ಗ್ರಂಥಗಳು ತಾವು ಒಳಗೊಂಡಿರುವ ವಿಷಯಗಳ ದೃಷ್ಟಿಯಿಂದ ವಿಶ್ವಕೋಶಗಳಂತಿವೆ. ಕೆಲವು ಕಥೆಗಳು ಅರಿಷ್ಟನೇಮಿ ಎಂಬವನ ಕಾಲದಲ್ಲಿ ನಡೆದಂಥವು. ಕೆಲವೆಡೆಗಳಲ್ಲಿ ಪಾಶ್ರ್ವ ಮತ್ತು ಮಹಾವೀರನ ಶಿಷ್ಯರು ಸಂವಾದಿಸುತ್ತಿದ್ದಾರೆ. ಅನೇಕ ಪ್ರವಚನಗಳಲ್ಲಿಯ ಉಪದೇಶ ಮಹಾವೀರ ಮತ್ತು ಆತನ ಶಿಷ್ಯರದೆಂದು ಹೇಳಲಾಗಿದೆ.

	ದೇವದ್ರ್ಧಿ ಈಗಾಗಲೆ ಉಪಲಬ್ಧವಾಗಿದ್ದ ಜೈನಾಗಮ ಪಾಠಗಳನ್ನು ಕ್ರಮಪಡಿಸಿ ಪರಿಷ್ಕರಿಸಿ ಪ್ರಾಯಶಃ ವರ್ಣನೆಗಳನ್ನೂ ಪಾಠಭಾಗಗಳನ್ನೂ ಒಂದು ಗ್ರಂಥದಲ್ಲಿ ಬರುವ ಪರ್ಯಾಯ ಶಬ್ದಗಳನ್ನೂ ಒಂದು ಮಟ್ಟಕ್ಕೆ ತಂದು ಮತ್ತು ಇತರ ಗ್ರಂಥಗಳಲ್ಲಿ ಇವನ್ನು ವಣ್ಣೋ, ಜಾವ ಇತ್ಯಾದಿ ಪದಗಳಿಂದಲೂ ಸಂಖ್ಯೆಗಳಿಂದಲೂ ಸೂಚಿಸಿ ಸಮಂಜಸವಾದ ಒಂದು ಸಮಗ್ರತೆ ಬರುವಂತೆ ಮಾಡಿದ್ದಾನೆ. ಅಲ್ಲಿ ಬರುವ ಪ್ರಕರಣಾಂತರ ಸೂಚನೆಗಳು ಒಬ್ಬನ ಕೈವಾಡವನ್ನೇ ತೋರುತ್ತವೆ. ಈಗಿನ ಉಪಾಂಗಗಳ ವಿಷಯ ಅಂಗಗಳಷ್ಟೇ ಹಳೆಯದಾಗಿದ್ದರೂ ಅಂಗಗಳಿಗೆ ಹೊಂದಿರುವಂತೆ ಉಪಾಂಗಗಳ ವಿಂಗಡಣೆ ಪ್ರಾಯಶಃ ಪಾಟಲೀಪುತ್ರದ ಮಂಡಲಿಯಿಂದೀಚೆಗೆ ಮಾಡಿದ ಒಂದು ಹೊಸ ಬದಲಾವಣೆಯಿರಬಹುದು. ಆಗಮದಲ್ಲಿ ಉಳಿದುಕೊಂಡಿರುವ ಹಿಂದಿನ ಪಟ್ಟಿಗಳಲ್ಲಿ ಇದು ಕಾಣಬರುವುದಿಲ್ಲ. ಇಂಥ ವರ್ಗರಚನೆಯಿಂದ ಪ್ರಶ್ನವ್ಯಾಕರಣಾನಿ ಎಂಬಂಥ ಗ್ರಂಥಗಳ ಒಳಪಡಿಗಳು ಪಲ್ಲಟಗೊಂಡಂತೆ ಭಾಸವಾಗುತ್ತದೆ. ಕೊನೆಯ ಪರಿಷ್ಕರಣದವರೆಗೂ ಈ ಮರು ಹೊರಳಿಕೆಗಳೂ ಭಾಗಗಳ ಎಡೆಮಾಡಿಸುವಿಕೆಯೂ ಜರಗುತ್ತಲೇ ಇದ್ದುವು. ಈಗಲೂ ಅವನ್ನು ಗುರುತಿಸಬಹುದು. ಕೆಲವೆಡೆಗಳಲ್ಲಿ ಒಳಪಡಿಯನ್ನು ಬೇರೆ ತರದಲ್ಲಿ ಓರಣಗೊಳಿಸುವುದು ಅವುಗಳ ದೃಷ್ಟಿಯಲ್ಲಿತ್ತೆಂಬುದನ್ನು ಕೆಲವು ನಿರ್ಯುಕ್ತಿಗಳು ವಿಶದವಾಗಿ ಸೂಚಿಸುತ್ತವೆ. ಷ್ಯೂಬ್ರಿಂಗ್ ಎಂಬಾತ ಸೂತ್ರ ಕೃತಾಂಗದ ಕೆಲವು ವಾಕ್ಯಗಳು ಸಮಂಜಸವಾದ ಅರ್ಥವನ್ನು ಕೊಡುವಂತೆ ಅವುಗಳ ಮರುಜೋಡಣೆ ಹೇಗೆ ಆಗಬೇಕೆಂಬುದನ್ನು ತೋರಿಸಿಕೊಟ್ಟಿದ್ದಾನೆ. ಪ್ರಕೀರ್ಣಗಳು ಅಧಿಕ ಸಂಖ್ಯೆಯಲ್ಲಿ ಇದ್ದರೂ ಅವುಗಳಲ್ಲಿ ಕೆಲವನ್ನು ಮಾತ್ರ ಆಗಮದಲ್ಲಿ ಸೇರಿಸಿದ್ದಾರೆ.

	ಅರ್ಧಮಾಗಧಿಯ ಆಗಮವನ್ನು ಕ್ರಿ.ಶ. ಐದನೆಯ ಶತಮಾನದಲ್ಲಿ ಪರಿಷ್ಕರಿಸಿದ್ದರೂ ಅದರ ಅರ್ಧಕ್ಕಿಂತ ಹೆಚ್ಚಿನ ಮತ್ತು ಹುರುಳಾದ ಭಾಗ ಕ್ರಿ.ಪೂ. ನಾಲ್ಕನೆಯ ಶತಮಾನದ ಪಾಟಲೀಪುತ್ರದ ಮಂಡಲಿಯದರಷ್ಟು ಹಳೆಯದು. ಸಾಂಪ್ರದಾಯಿಕ ವಚನಗಳ ಜತೆಗೆ ಆಗಮದಲ್ಲಿ ಗ್ರೀಕರ ಜೋತಿಷ್ಯವನ್ನು ಕುರಿತ ಮಾತುಗಳಿಲ್ಲದಿರುವುದೂ ಅದರ ಪ್ರಾಚೀನ ಪಾಠ ಭಾಗಗಳ ಛಂದಸ್ಸು ಮತ್ತು ಭಾಷೆ ಇವುಗಳ ರೀತಿಯೂ ಇದನ್ನು ಪ್ರಮಾಣಿಸುತ್ತವೆ. ಆಚಾರಾಂಗ ಮತ್ತು ಸೂತ್ರ ಕೃತಾಂಗಗಳ ಮೊದಲ ಭಾಗಗಳು ಆಗಮದ ಪ್ರಾಚೀನತಮವಾದ ಸ್ತರಗಳೆಂದು ಭಾವಿಸಲಾಗಿದೆ. ಜೇಡಸೂತ್ರಗಳ ಕೆಲವು ಪ್ರವಚನಗಳನ್ನೂ ಉತ್ತರಾಧ್ಯಯನದ ಕೆಲವು ಉಪದೇಶಗಳನ್ನೂ ಭಗವತೀ ಎಂಬುದನ್ನೂ ಇವುಗಳ ಜತೆಗೆ ಇರಿಸಬಹುದು. ಮೇಲೆ ವಿವರಿಸಿರುವ ಆಗಮ ಶ್ವೇತಾಂಬರರಿಗೆ ಮಾತ್ರ ಪ್ರಮಾಣ ಗ್ರಂಥವಾಗಿದೆ. ದಿಗಂಬರರು ಅದನ್ನು ಚೊಕ್ಕ ಎಂದು ಒಪ್ಪಿಕೊಳ್ಳುವುದಿಲ್ಲ. ಇದಕ್ಕೆ ಪ್ರತಿಯಾದ ಆಗಮ ಅವರಿಗಿದೆ. ಶ್ವೇತಾಂಬರ ಸಂಪ್ರದಾಯದ ಪ್ರಕಾರ, ಹದಿನಾಲ್ಕು ಪೂರ್ವರ ಜ್ಞಾನನಿಧಿ ಕೊರೆಯಾಗುತ್ತ ಬಂತು ಮತ್ತು ದೇವದ್ರ್ಧಿಯ ಕಾಲಕ್ಕೆ ಪೂರ್ವರನ್ನು ಒಳಗೊಂಡಿದ್ದ ಹನ್ನೆರಡನೆಯ ಆಗಮ ಕಣ್ಮರೆಯಾಯಿತು. ಆಗ ಈಗ ಇತ್ತೀಚಿಗಿನ ವ್ಯಾಖ್ಯಾನಗಳೂ ಪೂರ್ವರ ಗಾಥೆಗಳನ್ನು ಪ್ರಾಯಶಃ ಸಂಪ್ರದಾಯದ ಸ್ಮರಣೆಯಿಂದಲೇ ಏನೋ ಎತ್ತಿ ಹೇಳುತ್ತವೆ. ದಿಗಂಬರರಲ್ಲಿಯೂ ಅಂಗದ ಜ್ಞಾನ ಕ್ರಮೇಣ ಕಳೆದುಹೋದ ವಿಷಯದಲ್ಲಿ ಇಂಥದೇ ಒಂದು ಐತಿಹ್ಯವುಂಟು. ಆಗಮನ ಕಳೆದುಹೋಯಿತೆಂಬ ಹೇಳಿಕೆಯನ್ನು ಸಮರ್ಥಿಸಲು ಸ್ವಲ್ಪ ವಿವರಣೆ ಅವಶ್ಯಕ. ಮಠಗಳ ಪಾಠಶಾಲೆಗಳಲ್ಲಿ ಈ ಪವಿತ್ರ ಗ್ರಂಥಗಳ ವ್ಯಾಸಂಗ ನಡೆಯುತ್ತಿತ್ತೆಂಬುದಕ್ಕೂ ಅನೇಕ ವೇಳೆ ದೇಶದ ಬೇರೆ ಬೇರೆ ಭಾಗಗಳಲ್ಲಿ ಪರಸ್ಪರ ಸಂಪರ್ಕವಿಲ್ಲದೆಯೆ, ಉಪಾಧ್ಯಾಯರು ಶಿಷ್ಯರಿಗೆ ಈ ವಿದ್ಯೆಯನ್ನು ಕಲಿಸಿಕೊಡುತ್ತಿದ್ದರೆಂಬುದಕ್ಕೂ ಸಾಕಷ್ಟು ಆಧಾರಗಳಿವೆ. ವಿಸ್ಮøತಿಯ ದೆಸೆಯಿಂದಲೊ ವ್ಯಾಸಂಗ ಅನುಸ್ಯೂತವಾಗಿ ನಡೆಯಲಾಗದ ಕಾರಣದಿಂದಲೊ. ಶಾಸ್ತ್ರ ಪ್ರಕ್ರಿಯೆಗಳ ವಿವರಗಳು ಅಸ್ಪಷ್ಟವಾಗಿರುವುದರಿಂದಲೊ ಆಗಮ ವಿದ್ಯಾನಿಷ್ಣಾತರು ಗತಿಸಿಹೋದ ದೆಸೆಯಿಂದಲೊ-ಇವೇ ಮುಂತಾದ ಕಾರಣಗಳಿಂದ ಒಂದು ಮತ್ತೊಂದು ಪಾಠಶಾಲೆಗಳಲ್ಲಿ ಈ ಶಾಸ್ತ್ರಭಾಗದ ಅಭ್ಯಾಸ ಖಿಲವಾಗಿರಬಹುದು. ಒಂದು ಪಾಠಶಾಲೆಯಲ್ಲಿ ಯಾವುದಾದರೊಂದು ವಿಶಿಷ್ಟ ಶಾಖೆಯ ಅಭ್ಯಾಸ ವಿವರವಾಗಿ ನಡೆದು ಅದು ಅಲ್ಲಿ ಸುಸಂರಕ್ಷಿತವಾಗಿದ್ದರೆ. ಅದೇ ಸಮಯದಲ್ಲಿ ಬೆಳೆದ ಮತತತ್ತ್ವಗಳಲ್ಲಿ ಮೂಡಿದ ಕೆಲವು ಭಿನ್ನತೆಗಳ ದೆಸೆಯಿಂದ ಇತರರು ಅದನ್ನು ಕ್ರಮೇಣ ಸ್ವೀಕರಿಸದಿರುವುದುಂಟು. ಇಂಥ ಕಾರಣದಿಂದಲೇ ಪ್ರಾಯಶಃ ದಿಗಂಬರರು ಅಂಗಗಳನ್ನು ನಿರಾಕರಿಸಿದುದು ಮತ್ತು ಶ್ವೇತಾಂಬರರು ದೃಷ್ಟಿವಾದ ಖಿಲವಾಯಿತೆಂದು ಹೇಳುವುದು. ಹೀರಾಲಾಲರು ದೃಷ್ಟಿವಾದದ ಕೆಲವು ಭಾಗಗಳು ಸತ್ಕರ್ಮಪ್ರಾಭೃತ ಮತ್ತು ಕಷಾಯ ಪ್ರಾಭೃತಗಳ ಪ್ರಾಕೃತ ಸೂತ್ರಗಳ ತಳಹದಿಯಾಗಿವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ಸೂತ್ರಗಳು ಸಂಸ್ಕøತ ಮತ್ತು ಪ್ರಾಕೃತಗಳ ದೊಡ್ಡ ವ್ಯಾಖ್ಯಾನಗಳೊಡನೆ ಬೆಳಕಿಗೆ ಬಂದಿವೆ. ಇವುಗಳ ಮಿತವ್ಯಾಸಂಗದಿಂದ ನಮಗೆ ತಿಳಿದುಬಂದಿರುವುದೇನೆಂದರೆ. ಒಂದಾನೊಂದು ಕಾಲದಲ್ಲಿ ದಿಗಂಬರ ಶ್ವೇತಾಂಬರರಿಬ್ಬರಿಗೂ ಸಾಧಾರಣವಾಗಿದ್ದ ಸಾಹಿತ್ಯವೊಂದಿತ್ತು. ಈಗಿನ ದಿನದಲ್ಲಿಯೂ ಇಬ್ಬರಿಗೂ ಸಮಾನವಾದ ವಿಷಯ ಅವವೇ ಪದಗಳಿಂದ ನಿರೂಪಿತವಾಗಿರುವುದನ್ನು ಇಬ್ಬರ ಪ್ರಾಚೀನ ಸಾಹಿತ್ಯದಲ್ಲಿಯೂ ಕಾಣಬಹುದು. ಪ್ರಾಚೀನ ಚೈನ ಸಾಹಿತ್ಯದ ಮತ್ತು ಅದರೊಳಗಿನ ತತ್ತ್ವದ ಸಮಗ್ರ ವಿವೇಚನೆ ಜೈನರ ಈ ಎರಡು ಪಂಗಡಗಳೂ ಸಂರಕ್ಷಿಸಿಕೊಂಡು ಬಂದಿರುವ ಪ್ರಾಚೀನ ಗ್ರಂಥಗಳ ತುಲನಾತ್ಮಕ ವ್ಯಾಸಂಗದಿಂದ ಮಾತ್ರ ಸಾಧ್ಯ.

	ಜೈನಾಗಮ ಬೇರೆ ಬೇರೆ ಮೂಲಗಳಿಂದಲೂ ಕಾಲಗಳಿಂದಲೂ ಪ್ರಾಪ್ತವಾದ ಅನೇಕ ಕೃತಿಗಳನ್ನೊಳಗೊಂಡಿದೆ. ಮತ್ತು ಅದರ ಸಾಹಿತ್ಯ ಸ್ವರೂಪವನ್ನು ತೂಕ ಮಾಡಿ ಹೇಳುವುದು ಕಷ್ಟ. ಆಗಮದ ಪರಿಷ್ಕರಣ ಯಾವ ಸಂಶಯಕ್ಕೂ ಎಡೆಗೊಡದೆ ಸತ್ತ್ವತಃ ಬೇರೆಯೆಂದು ತೋರುವ ಕೃತಿಗಳ ಭಾಗಗಳನ್ನೂ ಒಟ್ಟಿಗೆ ತಂದಿದೆ. ಕೆಲವು ಗದ್ಯದಲ್ಲಿ ಕೆಲವು ಪದ್ಯದಲ್ಲಿ ಇವೆ. ಮತ್ತೆ ಕೆಲವು ಪದ್ಯ ಮತ್ತು ಗದ್ಯ ಇವೆರಡರಿಂದಲೂ ಕೂಡಿವೆ. ಆಚಾರಾಂಗದ ಗದ್ಯ ಪದ್ಯದ ತುಣುಕುಗಳು ಒಂದರೊಡನೊಂದು ಹೆಣೆದುಕೊಂಡಿವೆ. ಈ ದೆಸೆಯಿಂದ ಅದನ್ನು ವ್ಯಾಖ್ಯಾನಿಸುವಾಗ ಅನೇಕ ಕ್ಲೇಶಗಳು ಎದ್ದು ತೋರುತ್ತವೆ. ಹಳೆಯ ಗದ್ಯ ಗ್ರಂಥಗಳ ಶೈಲಿ ಅಷ್ಟು ಬಿಗಿಯಾಗಿಲ್ಲ. ಯಾಂತ್ರಿಕವಾಗಿ ಅನೇಕ ಮಾತುಗಳು ಪುನರಾವರ್ತನೆಗೊಂಡಿವೆ. ಅರ್ಥಗರ್ಭಿತವಾದ ಸೂತ್ರಪ್ರಾಯದ ವಾಕ್ಯಗಳು ಕೆಲವು ಕೃತಿಗಳಲ್ಲಿ ಕಂಡುಬರುತ್ತದೆ. ಔಪದೇಶಿಕ ಭಾಗಗಳು ಉದಾರವಾದ ಶೈಲಿಯಲ್ಲಿ ಅಚ್ಚುಕಟ್ಟಾಗಿ ತಮ್ಮ ಉಪದೇಶಗಳನ್ನು ನಿರ್ವಹಿಸುತ್ತವೆ. ಒಂದು ನೆಲೆಗಟ್ಟಿಗೊಳಪಟು ವರ್ಣನೆಗಳು, ಸಾಹಿತ್ಯಕ ಪರಿಣಾಮಕ್ಕೆಳಸಿ, ಅನಿಯತವಾದ ಸಮಾಸಪದಗಳಿಂದ ಕೂಡಿ. ಹಗುರಗೆಟ್ಟ ರಚನೆಯಲ್ಲಿವೆ. ಮಠಗಳಲ್ಲಿನ ಜೀವನಕ್ರಮದ ನಿಯಮಗಳು ವಿವರಗಳಿಂದ ತುಂಬಿವೆ. ಮತೀಯ ಸಿದ್ಧಾಂತದ ಪ್ರವಚನಗಳು ಒಳ್ಳೆಯ ಪ್ರಮಾಣದಲ್ಲಿ ಕ್ರಮಬದ್ಧವಾದ ನಿರೂಪಣೆಗಳನ್ನೊಳಗೊಂಡಿವೆ. ದೃಷ್ಟಾಂತ ಕಥೆಗಳನ್ನೂ ಸಂಕೇತಾರ್ಥವುಳ್ಳ ಉಪಮೆಗಳನ್ನೂ ಒಳಗೊಂಡಿರುವ ಅಖ್ಯಾಯಿಕೆಗಳಿವೆ. ತಪೋಧಿಕರ ಆದರ್ಶ ಕಥೆಗಳಿವೆ. ಸಿದ್ಧಾಂತಕ್ಕೆ ಸಂಬಂಧಪಟ್ಟ ಚರ್ಚೆಗಳಿವೆ. ಪಾಶ್ರ್ವ, ಮಹಾವೀರ ಮತ್ತು ಇತರ ಸಮಕಾಲೀನರ ಜೀವನ ಚರಿತ್ರೆಗಳ ವಿವರಗಳ ಜೊತೆಗೆ, ಆಗಮವನ್ನು ಪಾಳೀಗ್ರಂಥಗಳೊಡನೆ ಅಭ್ಯಾಸ ಮಾಡಿದ್ದೇ ಆದರೆ ಅಂದಿನ ಜನಜೀವನ ಹೇಗಿತ್ತು, ಅವರ ಆಲೋಚನೆಗಳು ಹೇಗೆ ಹರಿಯುತ್ತಿದ್ದುವು ಎಂಬ ವಿಚಾರದಲ್ಲಿ ಬೆಲೆಯುಳ್ಳ ವಿಷಯಗಳು ತಿಳಿದು ಬರುತ್ತವೆ.

	ಮಹಾವೀರ ಅರ್ಧ ಮಾಗಧಿಯಲ್ಲಿ ತನ್ನ ಉಪದೇಶಗಳನ್ನು ಮಾಡಿದ ಎಂಬುದಾಗಿ ಹೇಳಲಾಗಿದೆ. ಆದುದರಿಂದ ಆಗಮ ಭಾಷೆ ಅದು. ಪ್ರಾಚೀನ ಭಾಗಗಳು ಆರ್ಷೇಯವಾದ ಭಾಷಾರೂಪಗಳನ್ನೂ ಶೈಲಿಯನ್ನೂ ಕಾಪಾಡಿಕೊಂಡು ಬಂದಿವೆ. ಇವು ಮುಂದಿನ ಕೃತಿಗಳಲ್ಲಿ ಕಂಡುಬರುವುದಿಲ್ಲ. ಮತ್ತು ಕ್ರಿಸ್ತಶಕದ ಪ್ರಾರಂಭದ ಶತಮಾನಗಳಲ್ಲಿ ಸಾಹಿತ್ಯ ಭಾಷೆಯಾಗಿ ಬೆಳೆಯುತ್ತಿದ್ದ ಮಹಾರಾಷ್ಟ್ರೀ ಭಾಷೆಯಲ್ಲಿ ಎದ್ದು ಕಾಣುವ ಕೆಲವು ಮಾತಿನೊಲುಮೆಗಳ ಪ್ರಭಾವ ಇಲ್ಲಿ ಎದ್ದು ಕಾಣುತ್ತದೆ. ಉಪದೇಶವನ್ನು ಬಾಯಿಮಾತುಗಳ ಮೂಲಕ ಮಾಡುವುದರಿಂದಲೂ ಅದರಲ್ಲೂ ಶ್ವೇತಾಂಬರರಲ್ಲಿ ಮುನಿಗಳು ಪ್ರಾಕೃತವನ್ನು ಆಗಾಗಲೇ ಧಾರ್ಮಿಕ ಪ್ರಸಂಗಗಳ ಭಾಷೆಯನ್ನಾಗಿ ಉಪಯೋಗಿಸುತ್ತಿದ್ದುದಲ್ಲದೆ ಸಾಹಿತ್ಯೋಪಕರಣವಾಗಿಯೂ ಬಳಸುತ್ತಿದ್ದುದರಿಂದಲೂ ಇಂಥ ನವೀಕರಣ ಅನಿವಾರ್ಯವಾಯಿತು. ಇಬ್ಬರಿಗೂ ಸಾಮಾನ್ಯವಾದ ಪದ್ಯಗಳಲ್ಲಿ ದಿಗಂಬರರ ಪಾಠಗಳು ಶಬ್ದೋಚ್ಚಾರದ ನಡುವೆ ಬರುವ ವ್ಯಂಜನಗಳನ್ನು ಮೃದುಗೈಯುತ್ತವೆ. ಆದರೆ ಶ್ವೇತಾಂಬರ ಪಾಠಗಳೊ ವ್ಯಂಜನಗಳ ಕೈಬಿಟ್ಟು ಸ್ವರಗಳನ್ನು ಮಾತ್ರ ಉಳಿಸಿಕೊಳ್ಳುತ್ತವೆ.

	ಪಾಟಲೀಪುತ್ರದ ಮಂಡಲಿಗೆ ಮುಂಚೆ, ಚಂದ್ರಗುಪ್ತ ಮೌರ್ಯನ ಕಾಲದಲ್ಲಿ, ಜೈನಮುನಿಗಳ ತಂಡವೊಂದು, ಬರಗಾಲ ಬಂದಿದ್ದರಿಂದ, ಭದ್ರಬಾಹುವಿನ ಮುಂದಾಳುತನದಲ್ಲಿ ದಕ್ಷಿಣ ದೇಶಕ್ಕೆ ವಲಸೆ ಹೋಯಿತು. ಮತಗ್ರಂಥಗಳ ಜ್ಞಾನಭಂಡಾರ ವಿಸ್ಮøತಿಗೊಳಗಾಗುವ ಭೀತಿಯಿಂದ ಬರಗಾಲ ಮುಗಿದ ಮೇಲೆ, ಮುನಿಗಳ ಮಂಡಲಿಯೊಂದನ್ನು ಪಾಟಲೀಪುತ್ರದಲ್ಲಿ ಆಗಮವನ್ನು ಸಂಗ್ರಹಿಸಲು ಕರೆಸಿಕೊಳ್ಳಲಾಯಿತು. ಆದರೆ ಅಲ್ಲಿ ಸಂಕಲಿತವಾದ ಆಗಮವನ್ನು ದಕ್ಷಿಣಕ್ಕೆ ವಲಸೆ ಹೋದವರು ಅಂಗೀಕರಿಸಲಿಲ್ಲ. ಬರಗಾಲದ ಪರಿಸ್ಥಿತಿಗಳು ಪ್ರಾಯಶಃ ಮಗಧದಲ್ಲಿ ಉಳಿದುಕೊಂಡ ಜೈನಮುನಿಗಳ ಮತ್ತು ದಕ್ಷಿಣಕ್ಕೆ ವಲಸೆಹೋದವರ ಆಚಾರ ವ್ಯವಹಾರಗಳಲ್ಲಿ ವ್ಯತ್ಯಾಸವನ್ನುಂಟು ಮಾಡಿದವೆನ್ನಬೇಕು. ಅದಕ್ಕಿಂತಲೂ ಮುಂಚೆಯೇ ಸಿದ್ಧಾಂತಗಳಲ್ಲೂ ಆಚಾರಗಳಲ್ಲೂ ಭಿನ್ನತೆಗಳೇರ್ಪಟ್ಟಿರಬೇಕು. ಅಂದರೆ ವಿದ್ವಾಂಸರು ಜೈನಾಗಮವನ್ನು ಶ್ವೇತಾಂಬರ ಮತ್ತು ದಿಗಂಬರಗಳೆಂಬ ಎರಡು ವಿಭಾಗಗಳಾಗಿ ಒಡೆದುದಕ್ಕೆ ಇದೇ ಬೀಜವೆಂದು ಎಣಿಸುತ್ತಾರೆ. ಕೆಲಮಟ್ಟಿಗೆ ಇದು ದಿಗಂಬರರೇಕೆ ಪಾಟಲೀಪುತ್ರದ ಅರ್ಧ ಮಾಗದಿಯ ಆಗಮವನ್ನು ಅಂಗೀಕರಿಸುವುದಿಲ್ಲವೆಂಬುದನ್ನು ವಿವರಿಸುತ್ತದೆ. ಸಮಾಜದ ಧಾರ್ಮಿಕಾವಶ್ಯಕತೆಗಳನ್ನು ಪೂರೈಸಿ ಕೊಡಲು, ಇವರು ತಮ್ಮ ಸ್ಮøತಿಯಿಂದ ಕೆಲವು ಟಿಪ್ಪಣಿಗಳನ್ನು ಬರಹಕ್ಕಿಳಿಸಿದರು. ಇವು ಜೈನರ ಪ್ರತ್ಯಾಗಮವೆಂದು ಪರಿಗಣಿಸಬಹುದಾದ ಅನೇಕ ಪ್ರಾಕೃತಗ್ರಂಥಗಳ ರೂಪದಲ್ಲಿ ನಮಗೆ ಉಳಿದುಕೊಂಡು ಬಂದಿವೆ. ಇವುಗಳಲ್ಲಿ ಪ್ರಾಚೀನವಾದವು, ದೃಷ್ಟಿವಾದದ ಶೇಷಗಳಾದ ಸತ್ಕರ್ಮ ಮತ್ತು ಕಷಾಯ ಪ್ರಾಭೃತ ಎಂಬವು. ವೀರಾಸನ-ಜಿನಸೇನನ ವ್ಯಾಖ್ಯಾನಗಳು ತಮಗಿಂತ ಮುಂಚಿನ ವ್ಯಾಖ್ಯಾನಗಳನ್ನು ಒಳಗೊಂಡಿವೆ. ಮತ್ತು ಅವು ಮೂಲಸೂತ್ರಗಳೊಂದಿಗೆ ಎಷ್ಟೊಂದು ಸಾಂಪ್ರದಾಯಿಕ ವಿವರಗಳು ಸಂಬದ್ಧವಾಗಿದ್ದವೆಂಬುದನ್ನು ತೋರಿಕೊಡುತ್ತವೆ. ಅವು ಭಾರತದ ಮತಗಳಲ್ಲಿ ಜೈನಮತದ ಅಪೂರ್ವ ವೈಶಿಷ್ಟ್ಯವನ್ನು ಎತ್ತಿತೋರಿಸುವ ಕರ್ಮ ಎಂಬ ಗಹನವಾದ ತತ್ತ್ವವನ್ನು ವಿವರವಾಗಿ ಪ್ರತಿಪಾದಿಸುತ್ತವೆ. ಪ್ರತ್ಯಾಗಮದ ಕೃತಿಗಳಲ್ಲಿ ವಟ್ಟಕೇರ ಎಂಬಾತನ ಮೂಲಾಚಾರ ಮತ್ತು ಶಿವಾರ್ಯನ ಆರಾಧನಾ ಎಂಬವು ಆಗಮದೊಂದಿಗೆ ನಿಕಟ ಬಾಂಧವ್ಯವನ್ನು ಹೊಂದಿವೆ. ಮತ್ತು ಸಂನ್ಯಾಸ ಜೀವನದ ವಿಸ್ತಾರವಾದ ವಿವರಣೆಗಳನ್ನೂ ಅದರ ನಿಯಮ ನಡೆವಳಿಕೆಗಳನ್ನೂ ಕೊಡುತ್ತವೆ. ಪ್ರಾಕೃತ ಭಕ್ತಿಗಳು, ನಿತ್ಯ ಹೇಳುವ ಒಂದು ಬಗೆಯ ಸ್ತೋತ್ರ ಪ್ರಬಂಧಗಳು.

	ಅನೇಕ ಗ್ರಂಥಗಳು ಕುಂದಕುಂದನವೆಂದು ಹೇಳಲಾಗಿದೆ, ಆದರೆ ಅವುಗಳಲ್ಲಿ ಕೆಲವು ಮಾತ್ರ ನಮಗುಳಿದು ಬಂದಿವೆ. ಆತನ ಪಂಚಾಸ್ತಿಕಾಯ ಮತ್ತು ಪ್ರವಚನ ಸಾರ ಎಂಬವು ಜೈನರ ಸೃಷ್ಟಿಕ್ರಮ ಮತ್ತು ಭಾಷಾರ್ಥ ನಿರ್ಣಯವನ್ನು ಕ್ರಮಬದ್ದವಾಗಿ ನಿರೂಪಿಸುತ್ತವೆ. ಮತ್ತು ಆತನ ಸಮಯಸಾರ ಧಾರ್ಮಿಕ ಶ್ರದ್ಧೆಯಿಂದ ತುಂಬಿದೆ. ಯತಿವೃಷಭನ ತಿಲೋಯ ಪಣ್ಣಿತ್ತಿ ಎಂಬುದು ಅನೇಕ ವಿಷಯಗಳನ್ನೊಳಗೊಂಡಿರುವ ಆಕರಗ್ರಂಥ. ಸಾಂಪ್ರದಾಯಿಕ ವಿಷಯಗಳ ಆಧಾರದ ಮೇಲೆ ಸಂಕಲಿತವಾದ ಮತ್ತು ರಚಿತವಾದ ಈ ಗ್ರಂಥಗಳೆಲ್ಲವೂ ಕ್ರಿಸ್ತಶಕದ ಆದಿಮ ಶತಮಾನಗಳಿಗೆ ಸೇರಿದವುಗಳೆನ್ನಬಹುದು.

	ಪ್ರಾಕೃತ ಸಾಹಿತ್ಯದ ಬಹುಭಾಗ ವ್ಯಾಖ್ಯಾನ, ವಿವರಣಾತ್ಮ ನಿರ್ವಚನ ಉದಾಹೃತ ಕಥಾಪ್ರಸರಣ, ವಿಷಯಗಳ ಕ್ರಮವಿಭಾಗ ಇವುಗಳ ರೂಪದಲ್ಲಿ ಆಗಮದ ಸುತ್ತು ಬೆಳೆದುಕೊಂಡಿದೆ. ಕೆಲವು ಆಗಮ ಪಾಠಗಳ ಮೇಲೆ ನಿರ್ಯುಕ್ತಿಗಳೆಂಬ ಪದ್ಯರೂಪದ ವಾಖ್ಯಾನಗಳಿವೆ. ಇವು ಆಯಾ ವಿಷಯಗಳನ್ನು ಪ್ರಶ್ನೋತ್ತರ ರೂಪದಲ್ಲಿ ವಿವರಿಸುತ್ತವೆ. ಇವುಗಳ ಕರ್ತೃ ಭದ್ರಬಾಹುವೆಂದು ಹೇಳುತ್ತಾರೆ. ಇವು ದೇವದ್ರ್ಧಿಯ ಮಂಡಳಿಗಿಂತ ನಿಸ್ಸಂಶಯವಾಗಿ ಹಿಂದಿನವು. ಅವುಗಳಲ್ಲಿ ಕೆಲವು ತಮ್ಮ ಕ್ರಮಬದ್ಧ ನಿರೂಪಣೆ, ವಿವರಗಳ ನಿಷ್ಕ್ರಷ್ಟತೆ ಮತ್ತು ವಾದಗಳ ಗಟ್ಟಿತನಗಳಿಂದ ಮಹಾಪಂಡಿತರ ಶ್ರದ್ಧಾಪೂರ್ಣ ವ್ಯಾಸಂಗಕ್ಕೆ ತಕ್ಕವಾದವು. ಉದಾಹರಣೆಗೆ, ಜಿನಭದ್ರಕ್ಷಮಾಶ್ರಮಣ (ಕ್ರಿ.ಶ. 609) ಅವಶ್ಯಕ ನಿರ್ಯುಕ್ತಿಯ ಮೇಲೆ ಒಂದು ದೊಡ್ಡ ಭಾಷ್ಯವನ್ನು ಬರೆದ. ಇದರ ಸುತ್ತಲೂ ಸಾಹಿತ್ಯದೊಂದು ಚಿಕ್ಕ ಲೋಕವೆ ಬೆಳೆದುಕೊಂಡಿದೆ. ಕೆಲವು ಕೃತಿಗಳ ಮೇಲೆ ಭಾಷ್ಯ ಮತ್ತು ಚೂರ್ಣೀ ವ್ಯಾಖ್ಯಾನಗಳು ಲಭ್ಯವಾಗಿವೆ. ಭಾಷ್ಯವೆಂಬುದು ಗ್ರಂಥದ ವಿಸ್ತಾರವಾದ ಪ್ರಾಕೃತ ವ್ಯಾಖ್ಯಾನ; ನಿರ್ಯುಕ್ತಿಯ ಪದ್ಯಗಳನ್ನು ಅಳವಡಿಸಿ ಕೆಲವನ್ನು ಪರ್ಯಾಪ್ತಗೊಳಿಸುತ್ತ ಈ ಭಾಷ್ಯ ಬೆಳೆಯುತ್ತದೆ. ಚೂರ್ಣಿಯೋ ದಿಗ್ಬ್ರಮೆ ಹಿಡಿಸುವಂತೆ ಸಂಸ್ಕøತವನ್ನೂ ಪ್ರಾಕೃತವನ್ನೂ ಬೆರೆಸಿರುವ ಗದ್ಯಶೈಲಿಯಲ್ಲಿ ಬರೆದ ಟಿಪ್ಪಣಿ. ಜೀವದಾಸ ಮಹತ್ತರ ತನ್ನ ನಂದೀ ಚೂರ್ಣಿಯನ್ನು ಕ್ರಿ.ಶ. 676ರಲ್ಲಿ ಬರೆದ.

	4 ಭಾವಗೀತೆಗಳ ಸಂಕಲನಗಳು ಇತ್ಯಾದಿ: ಜನಪ್ರಿಯವಾದ ಗಾಥೆ ಪಾಳಿಯ ಆಗಮದಲ್ಲಿಯೇ ಅಲ್ಲದೆ ಮೃಚಕಟಕಂ ಎಂಬ ಶೂದ್ರಕನ ಲೌಕಿಕ ನಾಟಕದಲ್ಲಿಯೂ ಪ್ರವೇಶಗೊಂಡಿದೆ. ಅದರ ನಾದಮಾಧುರ್ಯ ಮತ್ತು ಶೃಂಗಾರಕ್ಕೊದಗಿ ಬರುವ ಗುಣಗಳನ್ನು ತನ್ನ ನಾಟಕದ ನಾಯಿಕೆಯರ ಗೀತಿಕೆಗಳಲ್ಲಿ ಕಾಳಿದಾಸ ಬಹು ಜಯಪ್ರದವಾಗಿ ಬಳಸಿಕೊಂಡಿದ್ದಾನೆ. ಪ್ರಾಕೃತದಲ್ಲಿ ಮುಖ್ಯವಾಗಿ ಮಹಾರಾಷ್ಟ್ರಿಯಲ್ಲಿ ಭಾವಗೀತೆಗಳು ಕಾಳಿದಾಸನಿಗಿಂತ ಇನ್ನೂರು ವರ್ಷಗಳ ಹಿಂದೆಯೆ ಹೇರಳವಾಗಿ ಬೆಳೆದಿದ್ದವೆಂಬುದು ಕಂಡುಬರುತ್ತದೆ. ಹಾಗೆ ಬರೆದುದಾಗಿ ಹೇಳಿರುವ ಸತ್ತಾಶ ಈ ಎಂಬ 700 ಗಾಥೆಗಳ ಸಂಕಲನ ನಮಗೆ ಲಬ್ದವಾಗಿದೆ. ಗ್ರಂಥಕ್ಕೆ ಅನೇಕ ಪಾಠಗಳಿವೆ. ಅದರಲ್ಲಿ ವ್ಯಾಖ್ಯಾನಕಾರರು ಅಲ್ಲಿನ ಹಲವು ಪದ್ಯಗಳು ಬೇರೆ ಬೇರೆ ಕವಿಗಳೆದೆಂಬುದಾಗಿ ಹೇಳುತ್ತಾರೆ. ಅವರಲ್ಲಿ ಕೆಲವರು ಸಾಹಿತ್ಯ ಚರಿತ್ರೆಯ ಮೂಲಕ ನಮಗೆ ಪರಿಚಿತರಾದವರು. ನಿಸ್ಸಂದೇಹವಾಗಿ ಅದೊಂದು ಸಂಕಲನ. ಅದರ ಸಂಪಾದಕ ಒಳ್ಳೆಯ ಮಟ್ಟದ ಸಾಹಿತಿ. ಆತ ತನ್ನ ಪದ್ಯಗಳ ಜತೆಗೆ ಜನರಲ್ಲಿ ಹರಡಿದ್ದ ಹಾಡುಗಳ ರಾಶಿಯಿಂದ ಈ ಪದ್ಯಗಳನ್ನು ಆರಿಸಿಕೊಂಡು ಸಂದರ್ಭ, ವಿಷಯ ಮತ್ತು ಭಾವಗಳ ದೃಷ್ಟಿಯಿಂದ ಅವನ್ನು ವಿಂಗಡಿಸಿ ಪರಿಷ್ಕರಿಸಿ ಸಾಹಿತ್ಯಕ ಶೈಲಿಯಲ್ಲಿ ಪ್ರಕಟಿಸಿದ್ದಾನೆ. ಕಲಾಕುಶಲತೆ ಮತ್ತು ಕವಿತಾ ಶೈಲಿಯ ದೃಷ್ಟಿಗಳಿಂದಲ್ಲದೆ ಈ ಪದ್ಯಮಾಲಿಕೆ ಮತ್ತೊಂದು ವಿಧದಲ್ಲಿ ಬಹುಮುಖ್ಯವಾಗಿದೆ. ಈ ಸಂಕಲನಕ್ಕೆ ಮುಂಚೆ ಪ್ರಾಕೃತದಲ್ಲಿ ತುಂಬ ಲೌಕಿಕ ಸಾಹಿತ್ಯವಿತ್ತೆಂದೂ ಅದರ ನಿರ್ಮಾಣದಲ್ಲಿ ಸ್ತ್ರೀಯರೂ ಒಳ್ಳೆಯ ಲವಲವಿಕೆಯಿಂದ ಭಾಗವಹಿಸುತ್ತಿದ್ದರೆಂದೂ ಅದು ತಿಳಿಸಿಕೊಡುತ್ತದೆ.

	ಅದರಲ್ಲಿಯ ವಿಷಯಗಳೆಲ್ಲ ಮುಖ್ಯವಾಗಿ ಗ್ರಾಮ್ಯಜೀವನಕ್ಕೆ ಸಂಬಂಧಪಟ್ಟವು; ಆದರೆ ರುಚಿಶುದ್ಧರಿಗೆ ಸೇರದದು ಒಂದೂ ಅದರಲ್ಲಿಲ್ಲ. ಋತು ಪರಿವರ್ತನೆಗಳು, ಗ್ರಾಮಗಳು, ಗ್ರಾಮ್ಯಜನ, ಅಲ್ಲಿನ ತರುಗಿಡಬಳ್ಳಿಗಳು, ಪಶು ಪಕ್ಷಿಗಳು, ಇವುಗಳೆಲ್ಲ ದರ ನೈಜಚಿತ್ರಗಳನ್ನು ಆ ಕವಿಗಳು ಒಂದೆರಡು ಪದ್ಯಗಳಲ್ಲಿ ಬಹು ಕೌಶಲದಿಂದ ರೇಖಿಸಿದ್ದಾರೆ. ಶೃಂಗಾರವೇ ಇಲ್ಲಿ ಮುಖ್ಯ. ಕೆಲಸಮಯದಲ್ಲಿ ಅದು ತೀರ ವಾಚ್ಯವಾಗಿದೆ. ಭಾರತೀಯ ಸಂಪ್ರದಾಯ ಸಂಸ್ಕಾರಗಳ ರುಚಿಯನ್ನು ತಳೆದು, ಪ್ರಣಯ ವೈಪರೀತ್ಯಗಳು ವಿಶದವಾಗಿಯೂ ಭಾವಪೂರ್ಣವಾಗಿಯೂ ಚಿತ್ರಿತವಾಗಿವೆ ಪ್ರಣಯೌತ್ಕಂಠ್ಯ, ವಿರಹವ್ಯಥೆ, ಪರಸ್ಪರಾನುರಕ್ತತೆ, ಚಾಟುವಚನ, ಅನಂಗಚೇಷ್ಟೆ ಇತ್ಯಾದಿಗಳು ತುಂಬ ನೈಜವಾಗಿ ಚಿತ್ರಿತವಾಗಿವೆ. ಸಾಂಪ್ರದಾಯಿಕ ಕವಿತೆಗಳಲ್ಲಿ ಇಂಥ ನೈಜವರ್ಣನೆ ದುರ್ಲಭ. ವ್ಯಾಖ್ಯಾನಕಾರರು ಈ ಸೂಚನೆಯನ್ನು ಅತಿ ಅಗ್ಗವಾಗಿ ಮಾಡಿದರೆ ಅದು ಕವಿಯ ಈ ನೇರ ಮಾತುಗಳು ವ್ಯಾಖ್ಯಾನಕಾರರಿಗೆ ಒಗ್ಗುತ್ತಿರಲಿಲ್ಲವಾದ ಪ್ರಯುಕ್ತ. ಕೆಲವು ದೃಶ್ಯಗಳು ಕರುಣಾಪೂರ್ಣವೂ ಸುವಾಸಿತವೂ ಆಗಿವೆ. ನೀರಡಿಸಿರುವ ಪಾಂಥನೊಬ್ಬನ ಬೊಗಸೆಗೆ ಚೆಲುವೆ ಹೆಣ್ಣೊಬ್ಬಳು ನೀರೆರೆಯುತ್ತಿದ್ದಾಳೆ; ಆತ ಅದನ್ನು ತನ್ನ ಬೆರಳುಗಳು ಸಂದಿಯಲ್ಲಿ ಸುರಿಯಗೊಡುತ್ತಾನೆ, ಅವಳು ತನ್ನ ಸರದಿಯಲ್ಲಿ ತಂಬಿಗೆಯ ನೀರಿನ ಧಾರೆಯನ್ನು ತೆಳ್ಳಗೆ ಮಾಡುತ್ತಿದ್ದಾಳೆ, ಹೀಗೆ ಅವರು ಒಬ್ಬರನ್ನೊಬ್ಬರು ನೋಡಿ ಆನಂದಿಸುವ ಸಮಯವನ್ನು ನಿಡಿದು ಮಾಡುತ್ತಿದ್ದಾರೆ. ಒಂದೆರಡು ಪದ್ಯಗಳಲ್ಲಿ ಕವಿಗಳು ಪರಿಣಾಮಕಾರಿಯಾದ ಚಿತ್ರವೊಂದನ್ನು ರೇಖಿಸಿಬಿಡುತ್ತಾರೆ. ಇದು ಪರಿಣತ ಕವಿಗಳಿಗೆ ಮಾತ್ರ ಸಾಧ್ಯ. ಸಂಸ್ಕøತ ಭಾಷೆಯ ಅಲಂಕಾರಿಕರು ಹಾಲನ ಪ್ರತಿಭೆಗೆ ತಮ್ಮ ಪುರಸ್ಕಾರವನ್ನು, ಸ್ವಲ್ಪ ಹೆಚ್ಚೆಂದೆ ಹೇಳಬಹುದಷ್ಟನ್ನು ಅವನ ಪದ್ಯಗಳನ್ನು ಉದಾಹರಣೆಗೆ ಎತ್ತಿಕೊಳ್ಳುವುದರ ಮೂಲಕ ಸಲ್ಲಿಸಿದ್ದಾರೆ. ಈಶ್ವರ-ಪಾರ್ವತಿ, ವಿಷ್ಣು-ಲಕ್ಷ್ಮಿ ಇವರ ಉಲ್ಲೇಖನ ಅಲ್ಲಲ್ಲಿ ಅಕಸ್ಮಾತ್ತಾಗಿ ಕಂಡು ಬಂದರೂ ಯಾವ ಮತದ ಸೊಗಡೂ ಗ್ರಂಥದಲ್ಲಿಲ್ಲ. ಪ್ರಾಕೃತಪ್ರಿಯರಾದ ಆಂಧ್ರಭೃತ್ಯ ಅರಸುಗಳಲ್ಲಿ ಒಬ್ಬನಾದ ಸಾತವಾಹನನೇ ಈ ಹಾಲನೆಂಬವನು. ಈತನ ಕಾಲದ ವಿಚಾರದಲ್ಲಿ ವಿದ್ವಾಂಸರ ಅಭಿಪ್ರಾಯಗಳು ಒಂದು ನಿಟ್ಟಿಗೆ ಬಂದಿಲ್ಲ. ಬಹುಶಃ ಇದು ಕ್ರಿ.ಶ. ಎರಡನೆಯ ಅಥವಾ ಮೂರನೆಯ ಶತಮಾನದಲ್ಲಿ ರಚಿತವಾದುದೆಂದು ಹೇಳಬಹುದು. ಈ ಬಗೆಯ ಗ್ರಂಥದಲ್ಲಿ ಸಹಜವಾಗಿಯೆ ಪ್ರಾಚೀನ ಕೃತಿಗಳು ಅಳವಟ್ಟಿವೆ. ಆದರೆ ಇತ್ತೀಚಿನವೂ ಸುಲಭವಾಗಿ ಇಲ್ಲಿ ಬಂದು ಸೇರಿಕೊಳ್ಳಲು ಅವಕಾಶವುಂಟು. ಸಂಸ್ಕøತದಲ್ಲೂ ಹಿಂದಿಯಲ್ಲೂ ಈ ಗ್ರಂಥದ ಅನುಕರಣೆಗಳುಂಟು. ಆದರೆ ಮೂಲ ಅಪ್ರತಿಮವಾಗಿಯೇ ನಿಂತಿದೆ. ಸಂಕಲನ ವಿಚಾರದಲ್ಲಿ ಹಾಲನ ಮಾರ್ಗವನ್ನೆ ಹಿಡಿದಿರುವ, ಆದರೆ ಪದ್ಯಗಳನ್ನು ಅವುಗಳ ವಿಷಯಗಳನ್ನು ಅನುಸರಿಸಿ ವಿಂಗಡಿಸಿರುವ, ಮತ್ತೊಂದು ಪ್ರಾಕೃತ ಸಂಕಲನ ಜಯವಲ್ಲಭನ (ಈತನ ಕಾಲ ಗೊತ್ತಿಲ್ಲ) ವಜ್ಜಾಲಗ್ಗಂ ಎಂಬುದು. ಈ ಗ್ರಂಥಕ್ಕೆ ಭಿನ್ನ ಪಾಠಗಳಿವೆ. ಶ್ಲೋಕಗಳ ಸಂಖ್ಯೆ ಏಳುನೂರರ ಹತ್ತಿರ ತೂಗಾಡುತ್ತಿದೆ. ಇದರ ಹೆಚ್ಚು ಭಾಗವನ್ನು ಜಯವಲ್ಲಭದೇವನೆ ಸ್ವಂತವಾಗಿ ರಚಿಸಿದ್ದಾನೆ. ಹಾಗೂ ಹಾಲ ಮತ್ತು ಇತರರಿಂದಲೂ ಪದ್ಯಗಳನ್ನು ಸಂಗ್ರಹಸಿಕೊಂಡಿದ್ದಾನೆ. ಧರ್ಮಾರ್ಥ ಕಾಮಗಳೆಂಬ ಮೂರು ಪುರುಷಾರ್ಥಗಳನ್ನು ಪ್ರತಿಬಿಂಬಿಸುವ ಕವಿತೆಗಳು ಅವುಗಳ ವಿಷಯಾನುಸಾರವಾಗಿ ಇಲ್ಲಿ ಜೋಡಣೆಗೊಂಡಿವೆ. ಗ್ರಂಥದ ಸುಮಾರು ಅರ್ಧಭಾಗದಷ್ಟು ಕಾಮಕ್ಕೆ ಮೀಸಲಾಗಿದೆ. ಪ್ರತಿಪಾದಿತ ವಿಷಯಗಳು-ಕವಿತೆ, ಮೈತ್ರಿ, ದೈವ, ಬಡತನ, ಸೇವೆ, ಬೇಟೆಗಾರ, ಆನೆ, ಹಂಸ, ದುಂಬಿ, ಇತ್ಯಾದಿಗಳು-ವಿಸ್ತಾರವಾಗಿವೆ. ಒಳ್ಳೆಯ ಮನುಷ್ಯನನ್ನು ಕನ್ನಡಿಗೆ ಹೋಲಿಸಲಾಗಿದೆ. ಕೆಟ್ಟ ಮನುಷ್ಯ, ಸೋಡಾ ಉಪ್ಪಿನಂತೆ, ಅವನ ಗುಣಗಳಿಗೆ ಹೊಳಪನ್ನು ಕೊಡುತ್ತಾನೆ, ಅಷ್ಟೆ. ಮರಳುಗಾಡಿಗೆ ಹಂಬಿಸುವ ಒಂಟೆಯನ್ನು ಕವಿ ನಿಂದಿಸುತ್ತಾನೆ. ದೈವ ವಿರುದ್ಧವಾಗಿರುವಾಗ ಅದು ಬಯಸಿದ್ದು ದೊರೆಯದು. ಕಾಮಕ್ಕೂ ಶೀಲದ ಮತ್ತು ಸಾಹಸದ ಬಣ್ಣವುಂಟು. ಕವಿ ಜೈನ, ಆದರೆ ಅವನ ಸಂಕಲನದಲ್ಲಿ ಸ್ವಮತನಿಷ್ಠೆ ಎಲ್ಲೂ ಕಂಡುಬರುವುದಿಲ್ಲ. ಮಹಾರಾಷ್ಟ್ರೀಯಲ್ಲಿರುವ ಅವನ ಗಾಥೆಗಳಲ್ಲಿ ಅಪಭ್ರಂಶಾಂಶಗಳು ಬೇಕಾದಷ್ಟಿವೆ. ಅಲ್ಲಿಯ ಪದ್ಯಗಳ ರೀತಿ ಹೇಮಚಂದ್ರ ತನ್ನ ಪ್ರಾಕೃತ ವ್ಯಾಕರಣದಲ್ಲಿ ಉದ್ದರಿಸಿರುವ ಪದ್ಯಗಳನ್ನು ಹೋಲುತ್ತದೆ. ಇದೊಂದು ಆಶ್ಚರ್ಯವೇ ಸರಿ, ಆದರೆ ಇದು ನಿಶ್ಚಯ, ಏನೆಂದರೆ, ಛಂದೋಲಂಕಾರ ಶಾಸ್ತ್ರಗಳನ್ನು ರಚಿಸಿದವರೆಲ್ಲ ಪ್ರಾಯಶಃ ಉದಾಹರಣೆಗಾಗಿ ಪ್ರಾಕೃತ ಪದ್ಯಗಳನ್ನು ಬಹಳವಾಗಿ ಎತ್ತಿ ಹೇಳುತ್ತಾರೆ. ಅವುಗಳ ಮೂಲ ಗೊತ್ತಿಲ್ಲ. ಆದರೆ ಇಂಥ ಅನೇಕ ರಚನೆಗಳೂ ಸಂಕಲನಗಳೂ ಹಿಂದೆ ಇದ್ದವೆಂಬುದನ್ನು ಅವು ತೋರಿಸಿಕೊಡುತ್ತವೆ. ರೂಪದಲ್ಲಿ ಪದ್ಯ ಸಂಕಲನಗಳನ್ನು ಹೋಲುವ, ಮತದ ಕಡೆಗೆ ವಾಲುವ, ಏಕಕರ್ತೃವಾದ ಕೆಲವು ಜೈನ ನೀತಿಗ್ರಂಥಗಳು ಪ್ರಾಕೃತದಲ್ಲಿವೆ. ಹಿತೋಪದೇಶಗಳನ್ನು ನೀತಿಭೋದೆಯನ್ನೂ ಮಾಡುವ ಹವ್ಯಾಸ ಜೈನ ಗ್ರಂಥಾಕಾರರ ವಿಶಿಷ್ಟಗುಣವೆನ್ನಬಹುದು. ಟೀಕೆ ಟಿಪ್ಪಣಿಗಳ ಜತೆಗೆ, ನಿರ್ಯುಕ್ತಿಗಳು ಹೇರಳವಾದ ನೈತಿಕ ಉಪದೇಶಗಳನ್ನೂ ಉದಾಹರಣೆಗಳನ್ನೂ ಸಂಕಲನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸೂತ್ರಪ್ರಾಯವಾದ ಶ್ಲೋಕಗಳನ್ನೂ ಒಳಗೊಂಡಿವೆ. ಐಶ್ವರ್ಯ ಮತ್ತು ಪ್ರಣಯಗಳನ್ನು ಜರೆಯದಿದ್ದರೂ ಅವುಗಳ ವಿಷಯದಲ್ಲಿ ಅನಾಸ್ಥೆ ಕಂಡುಬರುತ್ತದೆ. ಮತಾನುರಾಗಕ್ಕೆ ಅಲ್ಲಿ ತುಂಬ ಪ್ರಾಶಸ್ತ್ಯ.

	ಉಪದೇಶಮಾಲಾ ಎಂಬುದು ಧರ್ಮದಾಸ ರಚಿಸಿರುವ ನೀತಿಕಾವ್ಯ. ಇದರಲ್ಲಿ ಸಂನ್ಯಾಸಿಗಳ ಹಾಗೂ ಗೃಹಸ್ಥರ ಕರ್ತವ್ಯಗಳನ್ನು ಕುರಿತ 540 ಪದ್ಯಗಳಿವೆ. ಸಂಪ್ರದಾಯದ ಪ್ರಕಾರ ಧರ್ಮದಾಸ ಮಹಾವೀರನ ಸಮಕಾಲೀನನೇ ಅಲ್ಲದೆ ಸಂನ್ಯಾಸಿಯಾಗುವುದಕ್ಕೆ ಮುಂಚೆ ರಾಜನೂ ಆಗಿದ್ದ. ಈ ಗ್ರಂಥವನ್ನು ಆತ ತನ್ನ ಮಗನಾದ ರಾಜಪುತ್ರ ರಣಸಿಂಹ ಎಂಬುವನನ್ನು ಉದ್ದೇಶಿಸಿ ಬರೆದಿದ್ದಾನೆ. ಕ್ರಿ.ಶ. 9ನೆಯ ಶತಮಾನದಷ್ಟು ಹಿಂದೆಯೆ ಅವರ ಮೇಲೆ ರಚಿಸಿರುವ ವ್ಯಾಖ್ಯಾನಗಳನ್ನೂ ಮುಂದಿನ ಕೃತಿಕಾರರ ಮೇಲೆ ಅದು ಬೀರಿರುವ ಪ್ರಭಾವವನ್ನೂ ನೋಡಿದರೆ, ಗಣನೀಯವಾದ ಜನಪ್ರಿಯತೆಯನ್ನು ಗಳಿಸಿದ್ದ ಪ್ರಾಚೀನ ಕೃತಿ ಅದೆಂದು ನಿಸ್ಸಂಶಯವಾಗಿ ಹೇಳಬಹುದು. ನೀತಿ ಉಪದೇಶಗಳ ಜತೆಗೆ, ಜೈನ ತತ್ತ್ವಶಾಸ್ತ್ರಗಳ ವಿವರಗಳೂ ಪ್ರಾಚೀನ ಮಹಾಪುರುಷರ ಉಪಾಖ್ಯಾನಗಳೂ ಅದರಲ್ಲಿವೆ. ಇದರಂತೆಯೇ ಮತೀಯ ದೃಷ್ಟಿಯುಳ್ಳದ್ದೂ ನೀತಿ ಪರವೂ ವಿಷಯಗಳನ್ನು ಹೆಚ್ಚು ಸಂಪ್ರದಾಯಬದ್ದವಾಗಿ ನಿರೂಪಿಸುವಂಥದೂ ಅವನ್ನು ವಿಸ್ತಾರವಾದ ವ್ಯಾಖ್ಯಾನದ ಸಹಾಯವಿಲ್ಲದೆ ವಿದ್ವಾಂಸರಲ್ಲದವರಿಗೆ ದುರವಗಾಹವಾದ ಸೂತ್ರರೂಪದಲ್ಲಿ ಯಾಂತ್ರಿಕವಾಗಿ ಪ್ರತಿಪಾದಿಸುವಂಥದೂ ಆಗಿರುವ ಕೃತಿ ಉಪದೇಶಪದ ಎಂಬ ಸಾವಿರ ಗಾಥೆಗಳ ಗ್ರಂಥ. ಇದು ಕ್ರಿ.ಶ. ಎಂಟನೆಯ ಶತಮಾನದ ಪಂಡಿತಾಗ್ರಣಿ ಹರಿಭದ್ರನೆಂಬಾತನಿಂದ ಪ್ರಣೀತವಾದದ್ದು. ಇದು ಸುಲಭವಾದ ಶೈಲಿಯಲ್ಲಿ ನೀತಿ ಉಪದೇಶಗಳನ್ನು ನೀಡುವ ಬರಿಯ ಸಾಹಿತ್ಯ ಕೃತಿಯಲ್ಲ; ಶಾಸ್ತ್ರಕರವಾದ ಗ್ರಂಥ. ಮಲಧಾರಿಗಚ್ಛೆಯ ಹೇಮಚಂದ್ರನ ಉಪದೇಶಮಾಲಾ ಎಂಬುದರಲ್ಲಿ 500ಕ್ಕಿಂತ ಹೆಚ್ಛಿನ ಗಾಥೆಗಳಿವೆ, ಮತ್ತು ಜೀವದಯಾ ಇತ್ಯಾದಿ ವಿಷಯಗಳ ಮೇಲೆ ಸುಮಾರು ಇಪ್ಪತ್ತು ಉಪದೇಶಗಳಿವೆ. ಕೃತಿಕಾರ ಬರಿ ಉಪದೇಶಕ ಮಾತ್ರನಲ್ಲ. ಒಳ್ಳೆ ಪ್ರೌಢ ಶೈಲಿಯಲ್ಲಿ ಕಾವ್ಯಭೂಯಿಷ್ಠವಾದ ಪದ್ಯರಚನೆಯಲ್ಲಿ ಚತುರ ಆತ ಗುಜರಾತಿನ ಜಯಸಿಂಹ ಸಿದ್ದರಾಜನ (ಕ್ರಿ.ಶ. 1094-1143) ಸಮಕಾಲೀನ. ಈ ರಾಜನನ್ನು ಈತ ಗುಜರಾತಿನಲ್ಲಿ ಜೈನಮತಕ್ಕೆ ಹೆಚ್ಚು ಪ್ರೋತ್ಸಾಹ ಕೊಡುವಂತೆ ಪ್ರೇರಿಸಿದ, ಎರಡು ತಲೆಮಾರಿನಾಚೆಗೆ ಬಂದ ಬಾಲಚಂದ್ರನೆಂಬ ವ್ಯಾಖ್ಯಾನಕಾರ ಹೇಳಿರುವಂತೆ ಆಸಡ ಎಂಬಾತ ಗುಜರಾತಿನಲ್ಲಿರುವ ಭಿನ್‍ಮಾಲ್ ಎಂಬಲ್ಲಿಯ ರಾಜನಾದ ಕಟುಕರಾಜನ ಪುತ್ರ, ರಾಜವಂಶೀಕ. ಅವನ ವಿವೇಕಮಂಜರಿ (ಕಿ.ಶ. 1191) ಎಂಬ 140 ಪದ್ಯಗಳ ಗ್ರಂಥ ಧಾರ್ಮಿಕ ಪ್ರವೃತ್ತಿಯನ್ನು ಉದ್ಭೋಧಿಸುವ ಪ್ರಬಂಧಮಾಲೆ. ಅದರ ಅರ್ಥಕ್ಕಿಂತ ಹೆಚ್ಚುಭಾಗ ಪಾವನ ಪುರುಷರ ಚರಿತ್ರೆಯನ್ನು ಉದಾಹರಿಸುತ್ತ ಯಾಂತ್ರಿಕವಾಗಿ ಸಾಗುತ್ತದೆ. ಹಳೆಯ ಮಾದರಿ ಗ್ರಂಥಗಳನ್ನು ಅನುಕರಿಸಿ ಅನೇಕ ಗ್ರಂಥಕರ್ತರು ಕ್ರಿ.ಶ. ಹದಿಮೂರನೆಯ ಶತಮಾನದಿಂದ ಹದಿನೇಳನೆಯ ಶತಮಾನದವರೆಗೆ ಮತ ಮತ್ತು ನೀತಿಯನ್ನು ಉಪದೇಶಿಸುವ ಕೃತಿಗಳನ್ನು ಪ್ರಾಕೃತದಲ್ಲಿ ರಚಿಸಿದ್ದಾರೆ. ಅವುಗಳ ಸಾಹಿತ್ಯಕ ಗುಣಗಳಿಗಿಂತಲೂ ಅವುಗಳಲ್ಲಿ ಆಯಾ ಗ್ರಂಥಕರ್ತರು ತತ್ತ್ವಗಳನ್ನು ಆಳವಾಗಿ ಪರಿಚಿಂತಿಸಿ ಮುಂದಿನ ಪೀಳಿಗೆಗೆ ತಮ್ಮ ಚಿಂತನಾಫಲವನ್ನು ಒಪ್ಪಿಸಿರುವ ರೀತಿ ನಮ್ಮ ಮನಸ್ಸನ್ನು ತುಂಬ ಸೆಳೆಯುತ್ತದೆ.

	ಪ್ರಾಕೃತದಲ್ಲಿ ಆದರ್ಶಪ್ರಾಯವೆಂದು ಹೇಳಬಹುದಾದ ಹಲವಾರು ಪದ್ಯಗಳು ಪರಮಾತ್ಮನನ್ನು ಕುರಿತ ಸ್ತೋತ್ರಗಳ ವರ್ಗದಲ್ಲಿ ದೊರೆಯುತ್ತದೆ. ದೇವರ ಮಹಿಮೆಯನ್ನು ಕೊಂಡಾಡುವುದೇ ಅವುಗಳ ಮುಖ್ಯ ವಿಷಯ. ಅವುಗಳಲ್ಲಿ ಕೆಲವು ಭದ್ರಬಾಹು, ಮಾನತುಂಗ, ಧನಪಾಲ (ಕ್ರಿ.ಶ. 972), ಅಭಯದೇವ ಮುಂತಾದ ಶ್ರೇಷ್ಠ ಕವಿಗಳಿಂದ ರಚಿತವಾಗಿವೆ. ಋಷಿಮಂಡಲ ಸ್ತೋತ್ರ ಎಂಬುದು ಸಂನ್ಯಾಸಿಗಳ ಚರಿತ್ರೆಯನ್ನು ಹೇಳುತ್ತದೆ; ದ್ವಾದಶಾಂಗ ಪ್ರಮಾಣ ಎಂಬುದು ಅರ್ಧಮಾಗಧಿಯ ಆಗಮದ ಪರಿಮಿತ ವರ್ಣನೆ. ಸೋಮಸುಂದರ (15ನೆಯ ಶತಮಾನ) ಎಂಬಾತ ಕೆಲವು ಸ್ತೋತ್ರಗಳನ್ನು, ಪ್ರಾಕೃತ ಉಪಭಾಷೆಗಳನ್ನು ಅಭ್ಯಾಸ ಮಾಡಲೋಸುಗವೋ ಎನ್ನುವಂತೆ ಬರೆದಿದ್ದಾನೆ.

	5 ಜೈನ ಮಹಾರಾಷ್ಟ್ರಿ ಮತ್ತು ಅಪಭ್ರಂಶಗಳಲ್ಲಿ ಕಥನ ಸಾಹಿತ್ಯ: ಪ್ರಾಕೃತದಲ್ಲಿನ ಆಖ್ಯಾಯಿಕಾ ಸಾಹಿತ್ಯ, ಮುಖ್ಯವಾಗಿ ಜೈನ ಮಹಾರಾಷ್ಟ್ರೀ ಮತ್ತು ಅಪಭ್ರಂಶಗಳಲ್ಲಿನದು. ಬಹಳ ವಿಸ್ತಾರವಾಗಿದೆ, ವೈವಿಧ್ಯಪೂರ್ಣವಾಗಿದೆ. ಆ ಗ್ರಂಥಗಳಲ್ಲಿ ಮುಖ್ಯವಾದ ಕೆಲವನ್ನು ಮಾತ್ರ ಇಲ್ಲಿ ಪರಿಶೀಲಿಸಬಹುದು. ಆ ಸಾಹಿತ್ಯದಲ್ಲಿ ಬೃಹತ್ಕಥೆಯ ಜತೆಗೆ, ಶಲಾಕಾಪುರುಷರ, ಧೀರ ತಪಸ್ವಿಗಳ ಮತ್ತು ಶ್ರೇಷ್ಠ ಪುರುಷರ ಜೀವನಚರಿತ್ರೆಗಳೂ ನೀತಿಪರವಾದ ಪುರಾಣಕಥೆಗಳೂ ಉದಾಹರಣಾತ್ಮಕವಾದ ಕಲ್ಪನಾಕಥೆಗಳೂ ಅರ್ಧಭಾಗ ಐತಿಹಾಸಿಕಾಂಶವನ್ನೊಳಗೊಂಡ ಪ್ರಬಂಧಗಳೂ ಜನಪ್ರಿಯ ಶೃಂಗಾರ ಕಥೆಗಳೂ ಇವೆ. ಜೈನಾಗಮದಲ್ಲಿ ಇವುಗಳೆಲ್ಲವುಗಳ ಚಿಹ್ನೆಯನ್ನು ಕಾಣಬಹುದು. ವ್ಯಾಖ್ಯಾನಕಾರರು ದೊಡ್ಡ ಪ್ರಮಾಣದಲ್ಲಿ ಕಥೆಗಳನ್ನು ಪ್ರಾಕೃತದಲ್ಲಿಯೂ ಸಂಸ್ಕøತದಲ್ಲಿಯೂ ಪೂರ್ವ ಮೂಲಗಳಿಂದಲೊ ಸ್ವಂತವಾಗಿ ರಚಿಸಿಯೊ ಪೋಣಿಸಿದ್ದಾರೆ.

	ಬೃಹತ್ಕಥೆ ಎಂಬುದು ಗುಣಾಢ್ಯ ಪೈಶಾಚಿಯಲ್ಲಿ ಬರೆದ ಗ್ರಂಥ. ಅದು ನಮಗೆ ದೊರೆಯುವ ಸಂಭವ ಇಲ್ಲವೇ ಇಲ್ಲ ಎಂಬವರೆಗೆ ನಷ್ಟವಾಗಿದೆ. ಆದರೆ ಅದರ ಸಂಗ್ರಹವಾದ ನಿರೂಪಣೆ ಮಧ್ಯಯುಗದಲ್ಲಿ ರಚಿತವಾದ ಮೂಲ ಸಂಸ್ಕøತ ಗ್ರಂಥಗಳಲ್ಲಿದೆ. ಇವು ಮೂಲಗ್ರಂಥ ಮಹಾಗಂಭೀರವೂ ಬೃಹತ್ತೂ ಆದುದೆಂದೂ ರಾಮಾಯಣ ಮಹಾಭಾರತಗಳ ಜತೆಗೆ ಇಡಬಹುದಾದಂಥ ಕೃತಿಯೆಂದೂ ತಿಳಿಸಿಕೊಡುತ್ತವೆ. ಅದು ಅನೇಕ ಕವಿಗಳಿಗೆ ವಸ್ತು ಮತ್ತು ಉದ್ದೇಶಗಳನ್ನು ಒದಗಿಸಿದೆ. ದಂಡಿನ್, ಸುಬಂಧು, ಬಾಣ, ಮತ್ತಿತರರು ಅದನ್ನು ಬಹುಗೌರವದಿಂದ ಉಲ್ಲೇಖಿಸುತ್ತಾರೆ. ಗುಣಾಢ್ಯನ ವ್ಯಕ್ತಿತ್ವ ದಂತಕಥೆಗಳಲ್ಲಿ ಅಡಗಿಹೋಗಿದೆ. ಪ್ರಾಯಶಃ ಇದರಿಂದ ಆತ ಬಹಳ ಹಳಬನೆಂಬುದು ತಿಳಿದುಬರುತ್ತದೆ. ಆತ ಭಾಸನಿಗಿಂತ ಹಿಂದಿನವನಿರಬಹುದು. ಕ್ರಿ.ಶ. ಆದಿ ಶತಮಾನಗಳಲ್ಲಿ ಆತ ಜೀವಿಸಿದನೆಂದು ಹೇಳಬಹುದು.

	ವಿಮಲನೆಂಬುವ ತನ್ನ ಉಪಮಚರಿತೆವೆಂಬ ಪುರಾಣಕಾವ್ಯವನ್ನು ಆತನೇ ಹೇಳಿರುವಂತೆ, ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿ ರಚಿಸಿದ. ಆದರೆ ಜಾಕೋಬಿ ಈ ಕೃತಿಯ ಕಾಲ ಕ್ರಿ.ಶ. ಮೂರನೆಯ ಶತಮಾನವೆನ್ನುತ್ತಾನೆ. ಅದು ಜೈನರ ದೃಷ್ಟಿಯಲ್ಲಿ ರಾಮಾಯಣವನ್ನು ಹೇಳುತ್ತದೆ. ಕೃತಿಕಾರನಿಗೆ ವಾಲ್ಮೀಕಿ ರಾಮಾಯಣದ ಪರಿಚಯವಿತ್ತೆಂಬುದು ಗ್ರಂಥದಿಂದ ಸ್ಪಷ್ಟವಾಗುತ್ತದೆ. ಆದರೆ ಅದರಲ್ಲಿ ಜೈನ ಮನೋವೃತ್ತಿಯನ್ನು ಸ್ವಲ್ಪವೂ ತೋರಿಸದ ವಿಶಿಷ್ಟ ವಿವರಣೆಗಳಿವೆ. ಇವು ಬೇರೆ ಬೇರೆ ಕೃತಿಕಾರರು ಬೇರೆ ಬೇರೆ ರೀತಿಯಲ್ಲಿ ಹೇಳಿರುವ ರಾಮನ ಕಥೆಯ ಮೂಲವೇನೆಂಬುದನ್ನು ಶೋಧಿಸಲು ವಿದ್ವಾಂಸರಿಗೆ ಬಲು ಬೆಲೆಯುಳ್ಳವೆನಿಸಿವೆ. ರಾವಣ ರಾಕ್ಷಸನಲ್ಲ, ಮಾರುತಿ ಕಪಿಯೂ ಅಲ್ಲ; ಅವರು ದೇವತಾಕಲ್ಪರಾದ ವಿದ್ಯಾಧರರು. ವಿಮಲನ ಧಾರ್ಮಿಕೋಪದೇಶಗಳು ಉನ್ನತ ನೀತಿಗಳನ್ನು ಬೋಧಿಸುವಂಥವು. ಶೃಂಗಾರ ಹಾಗೂ ಐತಿಹ್ಯ ವಿಷಯಗಳನ್ನೂ ಒಳಗೊಂಡ ಅನೇಕ ಪ್ರಸಂಗಗಳನ್ನು ಆತ ವರ್ಣಿಸುತ್ತಾನೆ. ಅವನ ಗಾಥೆಗಳೂ ಕುಶಲವಾದ ಛಂದಸ್ಸುಗಳೂ ಆತನ ಕಾವ್ಯಚಾತುರ್ಯವನ್ನು ತೋರುತ್ತವೆ. ಆತನ ಶೈಲಿ ಉದ್ದಕ್ಕೂ ನಿರರ್ಗಳವಾಗಿ ಓಡುತ್ತ ಸ್ಛೂರ್ತಿವತ್ತಾಗಿದೆ. ಆ ಉಪಭಾಷೆಯೂ ಕಾವ್ಯದ ಪ್ರಾಚೀನತೆಯ ದೆಸೆಯಿಂದ ಮತ್ತು ಅದರಲ್ಲಿ ಕಂಡುಬರುವ ಅಪಭ್ರಂಶಾಂಶಗಳ ಸಲುವಾಗಿ ಕುತೂಹಲಜನಕವಾಗಿದೆ.

	ಕ್ರಿಸ್ತಶಕದ ಆದಿಯ ಶತಮಾನಗಳಿಗೆ ಸೇರಿದ ಪಾದಲಿಪ್ತ ಎಂಬಾತ ಈಗ ಉಪಲಬ್ಧವಲ್ಲದ ತರಂಗವಯೀ ಎಂಬ ಹೆಸರಿನ ಧಾರ್ಮಿಕ ವಿಷಯದ ಕಾದಂಬರಿಯೊಂದನ್ನು ಪ್ರಾಕೃತದಲ್ಲಿ ಬರೆದ. ಅವನ ವಿಷಯಕವಾದ ಐತಿಹ್ಯಗಳೂ ಆತನ ಕೃತಿಗೆ ಸಂದಿರುವ ಮೆಚ್ಚುಗೆಗಳೂ ಅದರ ಶ್ರೇಷ್ಠತೆಗೆ ಸಾಕ್ಷಿಗಳಾಗಿವೆ. ಧಾರ್ಮಿಕೋಪದೇಶದಿಂದ ಕೊನೆಗೊಳ್ಳುವ ಪ್ರಣಯ ಕಥೆಯಾಗಿತ್ತು ಅದು. ಅದರಿತ್ತೀಚಿನ ತರಂಗಲೋಲಾ ಎಂಬ ಪ್ರಾಕೃತ ಗ್ರಂಥ ಅದರ ಸಂಗ್ರಹ. ಅದರಿಂದ ಮೂಲ ಎಂಥ ಅಪ್ರತಿಮವಾದ ಕಾವ್ಯವೆಂಬುದು ಗೋಚರಕ್ಕೆ ಬರುತ್ತದೆ. ಸಂಘರಾಸ ಮತ್ತು ಸಂಘದಾಸರ ವಸುದೇವಹಿಂಡೀ (ಕ್ರಿ.ಶ. ಆರನೂರಕ್ಕೆ ಮುಂಚಿನವರು) ಎಂಬುದು ದೊಡ್ಡ ಗದ್ಯ ಕಥೆ. ಅದರಲ್ಲಿ ಹರಿವಂಶದ ವಸುದೇವನ ಸಂಚಾರವನ್ನು ಕುರಿತ ದೀರ್ಘ ವಿವರಣೆ ಇದೆಯಲ್ಲದೆ ಕಥೆಗೆ ಸಂಬಂಧಪಡದ ಅನೇಕ ಉಪಕಥೆಗಳೂ ದಂತಕಥೆಗಳೂ ಕಾಲ್ಪನಿಕ ಕಥೆಗಳೂ ಇವೆ. ಅದು ನಿಸ್ಸಂಶಯವಾಗಿ ಕ್ರಿ.ಶ. ಆರನೂರಕ್ಕೂ ಹಿಂದಿನದು. ಭದ್ರಬಾಹುವಿನ ಕೃತಿ ಈಗ ನಷ್ಟವಾಗಿರುವುದರಿಂದ, ಆ ಕೃತಿ ವಾಸ ದೇವಚರಿಯಾ ಎಂಬ ನಾಲ್ಕನೆಯ ಶತಮಾನದ ಕೃತಿಗೆ ಎಷ್ಟು ಋಣಿ ಎಂಬುದನ್ನು ಗೊತ್ತು ಮಾಡಲು ಅಸಾಧ್ಯವೆನಿಸಿದೆ. ಆದರೆ ಗುಣಾಢ್ಯನ ಬೃಹತ್ಕಥೆಗೆ ಅದರ ರೂಪ ಸಮೀಪವರ್ತಿಯಾಗಿದೆ ಎಂಬುದನ್ನು ತೋರಿಕೊಡುವ ಚಿಹ್ನೆಗಳು ಅದರಲ್ಲಿ ಕಂಡುಬರುತ್ತವೆ.

	ಶೀಲಾಚಾರ್ಯ ಶಲಾಕಾ ಪುರುಷರ ಜೀವನಚರಿತ್ರೆಯನ್ನು ಕ್ರಿ.ಶ. 868ರಲ್ಲಿ ಮಹಾಪುರುಷ ಚರಿತ ಎಂಬ ತನ್ನ ಗ್ರಂಥದಲ್ಲಿ ಬರೆದ. ಸುಮಾರು ಹತ್ತನೆಯ ಶತಮಾನದಲ್ಲಿ ಕಾಲಕಾಚಾರ್ಯ ಕಥಾನಕ ಎಂಬ ಕೃತಿ ನಿರ್ಮಿತವಾಯಿತು. ಅದರಲ್ಲಿ ಕಾಲಕ ಎಂಬ ಸಾಧು ಸಾಹಿಗಳೆಂಬ ಶಕಸತ್ರಪರ ಬಳಿಗೆ ಹೋಗಿ ಅವರ ಸಹಾಯದಿಂದ, ತನ್ನ ತಂಗಿ ಸರಸ್ವತಿಯನ್ನು ಅಪಹರಿಸಿದ್ದ ಉಜ್ಜಯಿನಿಯ ಅರಸನಾದ ಗರ್ಧಭಿಲ್ಲ ಎಂಬಾತನನ್ನು ಹೇಗೆ ಜಯಿಸಿದ ಎಂಬ ಕಥೆಯಿದೆ. ಐತಿಹಾಸಿಕ ಪ್ರಸಂಗವನ್ನಲ್ಲದೆ, ಕೃತಿಕಾರ ಕಾವ್ಯರಚನಾ ಚಾತುರ್ಯ ಮತ್ತು ವೀಕ್ಷಣ ಕೌಶಲವನ್ನೂ ಇಲ್ಲಿ ತೋರಿಸುತ್ತಾನೆ. ಧ್ಯಾನೇಶ್ವರನ ಸುರಸುಂದರೀ ಚರಿಯ (ಕ್ರಿ.ಶ. 1038) ಎಂಬುದು ಶೃಂಗಾರ ರಸದ ಹದಿನಾರು ಸರ್ಗಗಳುದ್ದದ ಕಾವ್ಯ. ಅದು ಆಸೆನಿರಾಶೆಗಳಲ್ಲಿ ಹೊಯ್ದಾಡುವ ವಿದ್ಯಾಧರರಾಜನ ಪ್ರಣಯಕತೆಯೊಂದನ್ನು ಹೇಳುತ್ತದೆ. ಕಥೆಯಲ್ಲಿ ಕಥೆಯನ್ನು ಹುದುಗಿಸಿಡುವ ಚಮತ್ಕಾರ ಇಲ್ಲಿ ಜಯಪ್ರದವಾಗಿವೆ. ಪ್ರಸಂಗಗಳ ನಿರೂಪಣೆ ತಡೆಯಿಲ್ಲದೆ ಓಡುತ್ತದೆ. ಸುಶಿಕ್ಷಿತವಾದ ಕವಿಗೆ ತಕ್ಕಂತಿರುವ ವರ್ಣನೆಗಳು ಇಲ್ಲಿವೆ. ಮಹೇಶ್ವರ ಸೂರಿಯ (ಹನ್ನೊಂದನೆ ಶತಮಾನದ ಮಧ್ಯಭಾಗಕ್ಕಿಂತ ಹಿಂದಿನವ) ಪಂಚಮೀ ಕಹಾ ಎಂಬುದು ಶ್ರುತ ಪಂಚಮೀವ್ರತದ ಆಚರಣೆಯ ಮಹಿಮೆಯನ್ನು ಉದಾಹರಣೆಯ ಕಥೆಗಳೊಡನೆ ವರ್ಣಿಸುತ್ತದೆ. ಸರಳವಾದ ಕಥನ ಶೈಲಿಯ 1003 ಗಾಥೆಗಳಲ್ಲಿ ವಿಜಯಚಂದ್ರ ಕೇವಲಿಯ ಜೀವನಚರಿತ್ರೆ ಅಷ್ಟವಿಧ ಪ್ರಜಾ ಫಲಗಳನ್ನು ಚಿತ್ರಿಸುವುದಕ್ಕಾಗಿ ರಚಿತವಾಯಿತು. ಕ್ರಿ.ಶ. ಹನ್ನೊಂದನೆಯ ಶತಮಾನದ ಅಂತ್ಯಭಾಗದಲ್ಲಿ ಅಭಯದೇವನ ಶಿಷ್ಯನಾದ ವರ್ಧಮಾನ ಎರಡು ಗ್ರಂಥಗಳನ್ನು ಬರೆದ, ಧಾರ್ಮಿಕ ಉಪದೇಶಗಳ ಒಲವನ್ನು ತೋರುವ ಶೃಂಗಾರ ಕಥೆ ಮನೋರಮಾಚರಿತ (ಕ್ರಿ.ಶ. 1083) ಎಂಬುದೊಂದು ಮತ್ತು ಮೊದಲನೆಯ ತೀರ್ಥಂಕರನ ಜೀವನಚರಿತ್ರೆಯನ್ನು ನಿರೂಪಿಸುವ ಪುರಾಣಕಾವ್ಯ. ಆದಿನಾಥಪುರಾಣ (ಕ್ರಿ.ಶ. 1103) ಎಂಬುದು ಏಳನೆಯ ತೀರ್ಥಂಕರನ ಜೀವನ ಚರಿತ್ರೆಯನ್ನು, ಆತನ ಪೂರ್ವಜನ್ಮವೃತ್ತಾಂತಗಳಿಂದ ಹಿಡಿದು ಮುಕ್ತಿಯವರೆಗೆ, ನಿರೂಪಿಸುವ ಬೃಹತ್ ಗ್ರಂಥ; ಅದರ ತುಂಬ ಧಾರ್ಮಿಕೋಪದೇಶಗಳಿವೆ. ಪ್ರತಿಯೊಂದಕ್ಕೂ ಜೈನಕೃತಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಉದಾಹರಣೆಯ ಕಥೆಗಳಿವೆ. ಗ್ರಂಥಕಾರನಿಗೆ ತನ್ನ ಭಾಷೆಯ ಮೇಲೆ ಬಹು ಕುಶಲವಾದ ಪ್ರಭುತ್ವವಿದೆ. ಆತ ಒಳ್ಳೆಯ ಕವಿಯೆಂಬುದನ್ನೂ ಆತನ ಕವಿತ್ವ ಸಂದರ್ಭಕ್ಕೆ ತಕ್ಕಂತೆ ಔನ್ಯತ್ಯಕ್ಕೇರಬಲ್ಲುದೆಂಬುದನ್ನೂ ಆತನ ಶೈಲಿ ಒಂದು ಬಾರಿಯಲ್ಲ ಅನೇಕ ಬಾರಿ ತೋರಿಸುತ್ತದೆ. ಕುಮಾರಪಾಲನೆಂಬ ಅರಸ ತೀರಿಕೊಂಡ ಹನ್ನೊಂದು ವರ್ಷಗಳ ಅನಂತರ ಸಮಪ್ರಭ ಎಂಬಾತ ಕುಮಾರಪಾಲ ಪ್ರತಿಬೋಧ (ಕ್ರಿ.ಶ. 1196) ಎಂಬುದನ್ನು ರಚಿಸಿದ. ಜೈನತತ್ತ್ವಗಳನ್ನು ವಿವರಿಸಲು ಉದಾಹರಣರೂಪವಾಗಿ ಅನೇಕ ಕಥೆಗಳನ್ನು ಹೇಳಿರುವ ದೊಡ್ಡ ಗ್ರಂಥವದು. ಅದರಲ್ಲಿನ ಕೆಲವು ಅಧ್ಯಾಯಗಳು ಸಂಸ್ಕøತ ಮತ್ತು ಅಪಭ್ರಂಶಗಳೆರಡರಲ್ಲೂ ಇವೆ. ಗುಜರಾತು ಮತ್ತು ಅದರ ರಾಜಧಾನಿ ಇವೆರಡನ್ನು ವರ್ಣಿಸಿದ ಬಳಿಕ, ಚಾಲುಕ್ಯ ರಾಜರ ಪರಿವಿಡಿಯನ್ನು ಬೇಗ ಉಲ್ಲೇಖಿಸಿ ಮುಗಿಸುತ್ತಾನೆ ಕವಿ. ಆ ಬಳಿಕ ಕುಮಾರಪಾಲ ಹೇಮಚಂದ್ರನನ್ನು ಸಂಧಿಸಿದನೆಂಬುದೂ ಅವರಿಬ್ಬರ ನಡುವೆ ಸಂಭಾಷಣೆ ಜರುಗಿತೆಂಬ ವಿಷಯವೂ ತಿಳಿದುಬರುತ್ತದೆ. ವಿಧವಿಧವಾದ ಕಥೆಗಳನ್ನು ಕೇಳಿದ ಬಳಿಕ ಕುಮಾರಪಾಲ ಜೈನವ್ರತಗಳನ್ನು ಕೈಕೊಂಡುದಲ್ಲದೆ ತನ್ನ ರಾಜ್ಯದಲ್ಲೆಲ್ಲ ಅವನ್ನು ಆಚರಿಸಬೇಕೆಂಬ ಆಜ್ಞೆ ಹೊರಡಿಸಿದ. ಆಖ್ಯಾಯಿಕಾ ಗ್ರಂಥಗಳು, ತಮ್ಮ ಪ್ರಬಂಧಗಳ ಮಾದರಿಗಳಿಗಾಗಿ, ತುಂಬ ಆಕರ್ಷಣೀಯವಾಗಿವೆ. ಅವುಗಳ ದೇಶ ಕಾಲಗಳು ಖಚಿತವಾಗಿರುವುದರಿಂದ ಆ ಕಾಲದ ಸಮಾಜವೆಂಥದೆಂಬುದರ ಬಗೆಗೆ ಉಪಯುಕ್ತ ಬೆಳಕನ್ನು ಅವು ಚೆಲ್ಲುತ್ತವೆ.

	ಅಪಭ್ರಂಶದಲ್ಲಿರುವ ಆಖ್ಯಾಯಿಕಾ ಗ್ರಂಥಗಳ ಹತ್ತಿರ ಬರುತ್ತ ನಮಗೆ ಬೇರೊಂದು ಹೊಸ ಲೋಕವನ್ನು ಪ್ರವೇಶಿಸಿದಂತೆ ಭಾಸವಾಗುತ್ತದೆ. ಭಾಷೆ ಬೆರಗುಗೊಳಿಸುವಂಥ ಛಾಯೆಗಳನ್ನು ತಾಳುತ್ತದೆ. ಛಂದಸ್ಸ್ಸುಗಳೂ ಬೇರೆ ತರದವು. ಕಥನದ ರೀತಿ ಬಹು ಮಧುರವಾಗಿದೆ. ಅಪಭ್ರಂಶ ರೂಪಗಳು ಕ್ರಿಸ್ತಶಕೆಯ ಆದಿಶತಮಾನಗಳಲ್ಲಿಯೇ ಕ್ರಮೇಣ ಪ್ರಾಕೃತದಲ್ಲಿ ತಲೆದೋರಹತ್ತಿದ್ದುವು; ಕಾಳಿದಾಸ ತನ್ನ ವಿಕ್ರಮೋರ್ವಶೀಯದಲ್ಲಿ ಅಪಭ್ರಂಶದ ಗೀತೆಗಳನ್ನು ಅಳವಡಿಸುವುದರಲ್ಲಿ ಏನೂ ಆಶ್ಚರ್ಯವಿಲ್ಲ. ಪ್ರತಿಯೊಂದು ಭಾಷೆಗೂ ಅದಕ್ಕೆ ವಿಶಿಷ್ಟವೆನಿಸುವ ಛಂದಸ್ಸುಂಟು. ಸಂಸ್ಕøತಕ್ಕೆ ಶ್ಲೋಕವುಂಟು. ಪ್ರಾಕೃತಕ್ಕೆ ಗಾಥೆ ಮತ್ತು ಅಪಭ್ರಂಶಕ್ಕೆ ಅದರ ದೋಹ. ಹಾಲನ ಸಂಕಲನಕ್ಕೆ ಮುಂಚೆ ಇದ್ದ ಗಾಥೆಗಳ ಸಮೂಹದಂತೆ, ಹೇಮಚಂದ್ರ ತನ್ನ ವ್ಯಾಕರಣದಲ್ಲಿ ಬಹುವಾಗಿ ಉದ್ಧರಿಸಿಕೊಡುವ ದೋಹಗಳಂಥ ದೋಹಸಮೂಹಗಳು ಈಚಿನ ಶತಮಾನಗಳಲ್ಲಿ ತಲೆಯಿಂದ ತಲೆಮಾರಿಗೆ ಹರಿದಾಡುತ್ತಿದ್ದಿರಬಹುದು. ಅಪಭ್ರಂಶದ ಛಂದಸ್ಸುಗಳನ್ನು ಪ್ರಾಕೃತದಲ್ಲೂ ಸಂಸ್ಕøತದಲ್ಲೂ ಉಪಯೋಗಿಸಲು ಓರೆದಾರಿಯನ್ನು ಹಿಡಿದಿದ್ದಾರೆ.

	ಚತುರ್ಮುಖ ಎಂಬವ ಅಪಭ್ರಂಶದ ಪ್ರಾಚೀನ ಕವಿಗಳಲ್ಲೊಬ್ಬ. ಆದರೆ ಆತನ ಯಾವ ಕೃತಿಯೂ ನಮಗೆ ದೊರೆತಿಲ್ಲ. ಆತ ಪದಗಳ ಆಯ್ಕೆಯಲ್ಲಿ ಪ್ರಸಿದ್ಧ. ಪಡ್ಡಡಿಯಾ ಛಂದಸ್ಸು ಜನಪ್ರಿಯವಾಗುವುದಕ್ಕೆ ಆತನೇ ಮುಖ್ಯ ಕಾರಣ. ಎಂಟನೆಯ ಶತಮಾನದ ಸ್ವಯಂಭೂ ಎಂಬಾತನ ವಿಚಾರವಾಗಿ ಆತನ ಮಗನಾದ ತ್ರಿಭುವನ ಸ್ವಯಂಭೂ ಎಂಬುವನಿಂದ ಬೇಕಾದಷ್ಟು ತಿಳಿದಿದೆ. ರಾಮಚರಿತ್ರೆಯನ್ನೂ ಭರತನ ಕಥೆಯನ್ನೂ ಹೇಳುವ ಪಉಮಾಚರಿಊ ಮತ್ತು ಹರಿವಂಶ ಪುರಾಣ ಎಂಬ ತನ್ನ ತಂದೆಯ ಮಹಾಕಾವ್ಯಗಳನ್ನು ಈತ ಸಮಗ್ರಗೊಳಿಸಿದ. ಅದೊಂದು ನಿಯಮವೆಂಬಂತೆ ಅಪಭ್ರಂಶ ಕವಿಗಳು ತಮ್ಮನ್ನು ತಾವು ಚೆನ್ನಾಗಿ ರೇಖಿಸಿಕೊಳ್ಳುತ್ತಾರೆ. ಈತ ತನ್ನ ಮೈ ತೆಳುವಾಗಿತ್ತೆಂದೂ ತನ್ನ ಹಲ್ಲುಗಳು ವಿರಳವಾಗಿದ್ದವೆಂದೂ ಹೇಳುತ್ತಾನೆ. ಆತನ ಮಗ ಆತನನ್ನು ಕುರಿತು ಈ ಪ್ರಕಾರವಾಗಿ ನಿರೂಪಿಸುತ್ತಾನೆ: “ಅಪಭ್ರಂಶವೆಂಬ ಹುಚ್ಚಾನೆ ಸ್ವಯಂಭೂವಿನ ಅಂಕುಶದ ಏಟಿಗೆ ಸಿಕ್ಕುವವರೆಗೂ ಸ್ವೇಚ್ಛೆಯಾಗಿ ತಿರುಗಾಡುತ್ತಿರುತ್ತದೆ. ಸಮೀಚೀನವಾದ ಪದಗಳೆಂಬ ಕೋರಹಲ್ಲುಗಳಿಂದಲೂ ಛಂದೋಲಂಕಾರಗಳೆಂಬ ನಖಗಳಿಂದಲೂ ವ್ಯಾಕರಣವೆಂಬ ನಿಬಿಡಕೇಸರದಿಂದಲೂ ಭೀಕರವಾದ ಸ್ವಯಂಭೂ ಎಂಬ ಸಿಂಹ ಜಯಶೀಲವಾಗಲಿ. ಯೋಗ್ಯತಂದೆಯ ಸಮರ್ಥನಾದ ಪುತ್ರ ತ್ರಿಭುವನ ಇವರು ಬಾಣ ಮತ್ತು ಅವನ ಮಗನನ್ನು ನಮ್ಮ ನೆನಪಿಗೆ ತರುತ್ತಾರೆ.

	ಹತ್ತನೆಯ ಶತಮಾನದ ಮಧ್ಯಭಾಗದಲ್ಲಿದ್ದ ಪುಷ್ಪದಂತನೆಂಬುವ ಅಪಭ್ರಂಶದ ಮುಖ್ಯ ಕವಿ. ಮಹಾಪುರಾಣ, ಜಸಹರಚರಿಉ ಮತ್ತು ನಾಯಕುಮಾರ್ ಚರಿಊ ಎಂಬ ಆತನ ಮೂರು ಕೃತಿಗಳು ಸಮೀಚೀನವಾಗಿ ಸಂಪಾದಿತವಾಗಿವೆ. ಈ ಕವಿಯ ವಿಚಾರದಲ್ಲಿ ತುಂಬ ಮಾಹಿತಿಗಳೂ ನಮಗೆ ದೊರೆತಿವೆ. ಜೈನಮತವನ್ನು ಸ್ವೀಕರಿಸುವ ಮುಂಚೆ ಶೈವರಾಗಿದ್ದ ಕೇಶವ ಮತ್ತು ಮಗ್ಧಾದೇವಿ ಎಂಬವರ ಪುತ್ರ ಆತ. ಅವನ ಬಾಳು ದುಃಖಮಯವಾಗಿತ್ತು. ತುಂಬ ಮೇಧಾವಿಯೂ ಆತ್ಮಗೌರವ ಸಂಪನ್ನನೂ ಆದ ಆತನಿಗೆ ಜೀವ ಒಂದು ದೊಡ್ಡ ಹೊರೆ ಎನಿಸಿತು. ಆತ ದಿಕ್ಕೆಟ್ಟು ಅಲೆಯುತ್ತ ರಾಷ್ಟ್ರಕೂಟರ ಮೂರನೆಯ ಕೃಷ್ಣರಾಜ ಆಳುತ್ತಿದ್ದ ಮಾನ್ಯಖೇಟಕ್ಕೆ ಬಂದನು. ಅಲ್ಲಿ ಭರತನೆಂಬ ಮಂತ್ರಿಯ ಆಶ್ರಯದಲ್ಲಿ ಅವನ ಪ್ರತಿಭೆ ಚೆನ್ನಾಗಿ ಚಿಗುರಿತು. ಸಂಸ್ಕøತ ಮತ್ತು ಪ್ರಾಕೃತದಲ್ಲಿನ ಉತ್ತಮಾಂಕಗಳನ್ನೆಲ್ಲ ಈತ ಅಪಭ್ರಂಶದಲ್ಲಿ ವ್ಯಕ್ತಗೊಳಿಸಿದ್ದಾನೆ. ಈತನ ಭಾಷೆ ಚುರುಕಾಗಿದೆ, ರಸವತ್ತಾಗಿದೆ. ಛಂದಸ್ಸಿನಲ್ಲಿ ವೈವಿಧ್ಯವಿದೆ, ವರ್ಣನೆಗಳು ಕುಶಲವಾಗಿವೆ. ಭಾವಪ್ರವಾಹ ಔಚಿತ್ಯದ ಕಟ್ಟುಪಾಡಿನಲ್ಲಿ ಹರಿಯುತ್ತದೆ; ಅಲಂಕಾರಗಳು ಹೇರಳವಾಗಿ ಪ್ರಯುಕ್ತವಾಗಿವೆ.

	ಕನಕಾಮರ ಎಂಬಾತ ತನ್ನ ಚಿತ್ರವನ್ನು ತಾನೇ ಕೊಟ್ಟುಕೊಂಡಿದ್ದಾನೆ. ಆದರೆ ಅವನ ದೇಶಕಾಲಗಳು ಇನ್ನೂ ನಿರ್ದಿಷ್ಟವಾಗಿಲ್ಲ. ಆತನ ಹತ್ತು ಸರ್ಗಗಳ ಕರಕಣ್ಣ ಚರಿತೆ ಎಂಬ ಗ್ರಂಥ ಸಾಕಷ್ಟು ವಿಶದವಾದ ಶೈಲಿಯಲ್ಲಿ ಪ್ರತ್ಯೇಕ ಬುದ್ಧರಲ್ಲಿ ಒಬ್ಬನಾದ ಕರಕಂಡ ಎಂಬಾತನ ಜೀವನ ಚರಿತ್ರೆಯನ್ನು ನಿರೂಪಿಸುತ್ತದೆ. ತೇರಗವಿಗಳನ್ನು ಕುರಿತು ಆತ ಹೇಳುವ ಪ್ರಾಸಂಗಿಕ ವಾಕ್ಯಗಳ ಬಹು ಕುತೂಹಲ ಜನಕವಾಗಿವೆ. ಧಕ್ಕಡವಂಶದ ಧನಪಾಲ (ಕ್ರಿ.ಶ. ಹತ್ತನೆಯ ಶತಮಾನ) ಭವಿಸಟ್ಟಕಹಾ ಎಂಬುದನ್ನು ಬರೆದ. ಇದರಲ್ಲಿ ಕಥಾನಾಯಕ ತುಂಬ ಕಷ್ಟಕ್ಕೊಳಗಾಗಿ ಕೊನೆಗೆ ತನ್ನ ಸದ್ಗುಣಗಳ ಸಹಾಯದಿಂದ ತನ್ನ ಮನೋರಥವನ್ನು ಹೇಗೆ ಸಾಧಿಸಿಕೊಂಡ ಎಂಬುದರ ಸುಂದರ ವರ್ಣನೆಯಿದೆ. ಹರಿಭದ್ರನ ನೇಮಿನಾಹಚರಿಊ (ಕ್ರಿ.ಶ. 1159) ಎಂಬುದರಲ್ಲಿ ಸುಂದರವಾದ ವರ್ಣನೆಗಳಿವೆ. ಮತ್ತು ಅದು ರಡ್ಡಾ ಛಂದಸ್ಸಿನಲ್ಲಿದೆ. ವಿದ್ಯಾಪತಿಯ ಕೀರ್ತಿಲತಾ (ಕ್ರಿ.ಶ. 14ನೆಯ ಶತಮಾನ) ಎಂಬುದು ಇತ್ತೀಚಿನ ಕೃತಿಯಾದರೂ ನಮ್ಮ ಆಸಕ್ತಿಯನ್ನು ಅದು ಬಹು ವಿಧದಲ್ಲಿ ಸೆರೆಹಿಡಿಯುತ್ತದೆ. ಅದೊಂದು ಪೂರ್ವಭಾರತದ ಅಪಭ್ರಂಶೋತ್ರ ಭಾಷೆಯ ಮಾದರಿಯಾಗಿದೆ. ವಿಷಯ ಐತಿಹಾಸಿಕ, ಗದ್ಯ ಮಿಶ್ರವಾದ ಗ್ರಂಥ ಸಂಭಾಷಣಾ ರೂಪದಲ್ಲಿದೆ.

	ಅಪಭ್ರಂಶ ಸಾಹಿತ್ಯದ ಬಹುಭಾಗ ಇನ್ನೂ ಅಮುದ್ರಿತ ಕರಡುಗಳಲ್ಲಿ ಉಳಿದಿದೆ. ಪ್ರತಿ ವರ್ಷವೂ ಹೊಸಕೃತಿಗಳು ಕಣ್ಣಿಗೆ ಗೋಚರಿಸುತ್ತಿವೆ. ಧವಳನ ಹರಿವಂಶ (ಒಂಬತ್ತನೆಯ ಶತಮಾನ) ಒಂದು ದೊಡ್ಡ ಗ್ರಂಥ. ಅದರಲ್ಲಿ ಅವನಿಗಿಂತ ಮುಂಚಿನ ಕವಿಗಳಿಗೆ ಸಂಬಂಧಪಟ್ಟ ವಿಷಯಗಳು ಬಹುಮಟ್ಟಿಗೆ ಸಿಕ್ಕುತ್ತವೆ. ಹರಿಷೇಣನ ಧರ್ಮಪರೀಕ್ಷಾ (ಕ್ರಿ.ಶ. 988) ಎಂಬ ಗ್ರಂಥ ಅಮಿತಗತಿಯ ಸಂಸ್ಕøತದ ಕೃತಿಗಿಂತ ಹಿಂದಿನದಲ್ಲದೆ ಅದಕ್ಕಿಂತಲೂ ಹಿಂದಿನ ಜಯರಾಮನ ಗಾಥೆಯ ರೂಪದಲ್ಲಿರುವ ಗ್ರಂಥವೊಂದನ್ನು ಕುರಿತು ಕೆಲವು ಮಾತುಗಳನ್ನು ಹೇಳುತ್ತದೆ. ಶೋರೀಚಂದ್ರನ ಕಥಾಕೋಶ (ಕ್ರಿ.ಶ. ಹನ್ನೊಂದನೆಯ ಶತಮಾನದ ಅಂತ್ಯಭಾಗ) ಎಂಬುದು ಶಿವಾಚಾರ್ಯ ಎಂಬಾತನ ಆರಾಧನಾ ಎಂಬ ಗ್ರಂಥದಲ್ಲಿನ ಗಾಥೆಗಳ ಕಥೆಗಳನ್ನು ನಿರೂಪಿಸುತ್ತದೆ. ಇನ್ನೂ ಕೈಬರೆಹದಲ್ಲಿ ಉಳಿದಿರುವ ಅನೇಕ ಅಪಭ್ರಂಶ ಕೃತಿಗಳು ಈ ಸಾಹಿತ್ಯಕ ಅಪಭ್ರಂಶದ ವ್ಯವಸಾಯ ಮೊಗಲರ ಕಾಲದವರೆಗೂ ನಡೆಯುತ್ತಿತ್ತೆಂಬುದನ್ನು ಸಾರುತ್ತವೆ. ಅವುಗಳಲ್ಲಿ ಅಡಕವಾಗಿರುವ ಭಾಷಾ ಶಾಸ್ತ್ರಾಂಶಗಳು ಆಧುನಿಕ ಇಂಡೋ-ಆರ್ಯನ್, ಅದರಲ್ಲೂ ಮುಖ್ಯವಾಗಿ ಗುಜರಾತಿ, ಹಿಂದಿ ಮತ್ತು ರಾಜಸ್ತಾನೀ-ಇವುಗಳ, ಆದಿಭಾಗದ ಚರಿತ್ರೆಯನ್ನು ಪುನಃ ರೂಢಿಸುವುದಕ್ಕೆ ಅತ್ಯಂತ ಮಹತ್ತ್ವವುಳ್ಳವುಗಳಾಗಿವೆ.

	6 ಪ್ರೌಢ ಕಾವ್ಯ ಮತ್ತು ಚಂಪೂ: ಪ್ರಾಕೃತ ಸಾಹಿತ್ಯ ಸಂಸ್ಕøತ ಸಾಹಿತ್ಯದ ಜೊತೆ ಜೊತೆಗೇ ಬೆಳೆದಿದೆ. ಆದುದರಿಂದ ಸಹಜವಾಗಿಯೇ ತುಂಬ ಅಲಂಕಾರಗಳಿಂದ ಕೂಡಿದ ಪ್ರೌಢ ಶೈಲಿಯ ಪದ್ಯ ಕಾವ್ಯಗಳೂ ಮತ್ತು ಕಾಲ್ಪನಿಕ ಕಥೆಗಳನ್ನು ಹೇಳುವ ಗದ್ಯಗಳೂ ಸಂಸ್ಕøತದಲ್ಲಿರುವಂತೆ ಪ್ರಾಕೃತದಲ್ಲೂ ಇವೆ. ವಾಕಾಟಕ ವಂಶದ ಪ್ರವರಸೇನನ ಸೇತುಬಂಧ ಅಥವಾ ದಹಮುಹವಹ ಎಂಬ ಕಾವ್ಯ ಸಾಗರಕ್ಕೆ ಕಪಿಗಳು ಸೇತುವನ್ನು ಕಟ್ಟುವ ರಾಮಾಯಣದ ಒಂದು ಪ್ರಸಂಗವನ್ನು ಕುರಿತದ್ದು. ಗ್ರಂಥಕರ್ತ ಒಳ್ಳೆಯ ನುರಿತ ಕವಿ. ಛಂದೋಲಂಕಾರ ಪ್ರಯೋಗಗಳಲ್ಲಿ ಪರಿಣತಿ ಹೊಂದಿದವ, ಮತ್ತು ಅವನ ಕೃತಿ ಮಹಾಕಾವ್ಯದ ಎಲ್ಲ ಚಹರೆಗಳನ್ನೂ ತೋರುತ್ತದೆ. ಕವಿಸಹಜವಾದ ವರ್ಣನೆಗಳಲ್ಲಿ ಆತನ ಕೌಶಲ ಬಹಳ ಮತ್ತು ಛಂದೋ ವಿನ್ಯಾಸದಲ್ಲಿ ತುಂಬ ಪರಿಶ್ರಮವುಳ್ಳವನು. ಕಾವ್ಯದ ಶೈಲಿಯಲ್ಲಿ ಆಡಂಬರವೆದ್ದು ಕಂಡರೂ, ಮಧುರವಾದ ಶಬ್ದಗಳು, ಮನೋಹರವಾದ ವರ್ಣನೆಗಳು, ಆಕರ್ಷಕವಾದ ವಿಚಾರಸರಣಿಗಳು, ಶ್ರುತಿಮನೋಹರವಾದ ಪ್ರಾಸಾನುಪ್ರಾಸಗಳು ಇಂಥ ಗುಣಗಳಿಂದ ಈ ಕಾವ್ಯ ಸುರಭಿತವಾಗಿದೆ. ಆದುದರಿಂದ ಬಾಣನೂ ದಂಡಿಯೂ ಇಂಥ ಉತ್ಕøಷ್ಟ ಕೃತಿಯನ್ನು ಬಹುಮಾನ ಪುರಸ್ಸರವಾಗಿ ನೆನೆದಿರುವುದು ಸಹಜವಾಗಿಯೇ ಇದೆ.

	ಯಶೋವರ್ಮ ರಾಜನ (ಕ್ರಿ.ಶ. 733) ಆಸ್ಥಾನ ಕವಿಯಾದ ವಾಕ್ಪತಿರಾಜನ ಗೌಡವಾಹೋ ಎಂಬ ಕಾವ್ಯ ಗೌಡದೇಶದ ರಾಜನ ವಧೆಯನ್ನು ಕುರಿತದ್ದು. ಆದುದರಿಂದ ಅದರ ರಚನೆ ಐತಿಹಾಸಿಕ ಘಟನೆಯೊಂದನ್ನು ಅವಲಂಬಿಸಿದೆ. ಕಾವ್ಯದಲ್ಲಿ ಕಥಾವಸ್ತುವೇನೋ ಅಷ್ಟಾಗಿಲ್ಲ; ಅದರ ಕಟ್ಟಡವೂ ಬಿಗಿಯಾಗಿಲ್ಲ. ಕಾವ್ಯದ ಹೆಚ್ಚು ಭಾಗ, ಈಗ ಲಬ್ದವಾಗಿರುವಂತೆ, ಅಲಂಕಾರ ನಿಬಿಡವಾದ ಪ್ರತಿಭಾಪೂರ್ಣವೂ ಪಂಡಿತಗಮ್ಯವೂ ಆದ ವರ್ಣನೆಗಳಿಂದ ಕೂಡಿದೆ. ಗ್ರಾಮ್ಯಜೀವನದ ವರ್ಣನೆ ತುಂಬ ನೈಜವಾಗಿದೆ ಯಾವ ವಿಷಯವನ್ನೆತ್ತಿಕೊಂಡರೂ ಅದಕ್ಕೆ ವಾಕ್ಪತಿ ಚೆಲುವನ್ನೂ ಜೀವಕಳೆಯನ್ನೂ ಕೊಡುತ್ತಾನೆ. ಭಾರತೀಯ ಕಾವ್ಯಪ್ರತಿಭೆಗೆ ಕಾಳಿದಾಸ ವಾಕ್ಪತಿಗಳು ಎರಡು ಅಪೂರ್ವ ಸುಂದರ ಮುಖಗಳು. ಒಬ್ಬ ಉಪಮೆಯಲ್ಲಿ ಅದ್ವಿತೀಯನಾದರೆ ಮತ್ತೊಬ್ಬ ಉತ್ವ್ರೇಕ್ಷೆಯಲ್ಲಿ ಅನುಪಮ.

	ಹರಿಭದ್ರ ಎಂಟನೆಯ ಶತಮಾನದ ಶ್ರೇಷ್ಠ ತಾರ್ಕಿಕ ಮತ್ತು ಪ್ರಸಿದ್ಧ ಗ್ರಂಥಕರ್ತ. ಅವನು ತನ್ನನ್ನು ಯಾಕಿನೀ-ಮಹತ್ತರಾ-ಸೂನು ಎಂದು ಕರೆದುಕೊಳ್ಳುತ್ತಾನೆ ಮತ್ತು ಅವನ ಕೃತಿಗಳು ವಿರಹ ಎಂಬ ಮಾತಿನಿಂದ ಕೊನೆಗೊಳ್ಳುತ್ತವೆ. ಇವುಗಳ ವ್ಯಾಖ್ಯಾನರೂಪವಾಗಿ ಆತನ ವ್ಯಕ್ತಿತ್ವಕ್ಕೆ ಸಂಬಂಧಪಟ್ಟಂತೆ ಎಷ್ಟೋ ದಂತಕಥೆಗಳಿವೆ. ಆತನ ಸಮರಾ ಇಚ್ಛಕಹಾ ಎಂಬುದೊಂದು ಪ್ರಾಕೃತ ಚಂಪೂ: ಅದರಲ್ಲಿ ಎರಡು ಜೀವಗಳು ಹೇಗೆ ಒಂಬತ್ತು ಜನ್ಮಗಳಲ್ಲಿ ಪರಸ್ಪರವಾಗಿ ಹೋರಾಡಿದುವು ಎಂಬುದರ ವರ್ಣನೆಯಿದೆ. ಕವಿ ಮನುಷ್ಯಜೀವಿತವನ್ನು ಸೂಕ್ಷ್ಮವಾಗಿ ನೋಡಿರುವವ. ವಿಧವಿಧವಾದ ಪರಿಸರಗಳಲ್ಲಿ ಮನುಷ್ಯರ ನಡತೆಗಳು ಹೇಗಿರುತ್ತವೆ ಎಂಬುದರ ಪರಿಜ್ಞಾನವೂ ಆತನಿಗುಂಟು. ಆತನದು ಒಳ್ಳೆ ಪಳಗಿದ ಶೈಲಿ. ಗ್ರಾಮಗಳು, ಸರಸ್ಸುಗಳು, ಕಾಡುಗಳು ಮತ್ತು ಗುಡಿಗಳು ಇವುಗಳ ವರ್ಣನೆಗಳಲ್ಲಿ ಅದು ಹೊಳಹು ಹಾಕುತ್ತದೆ. ಮತಪ್ರಕ್ರಿಯೆಗಳು, ನೀತಿ ಉಪದೇಶ ಮುಂತಾದ ಧಾರ್ಮಿಕ ವಿಷಯಗಳು ಅಲ್ಲಲ್ಲಿ ಹೆಣೆದುಕೊಂಡಿವೆ. ಕೆಲವು ವೇಳೆ ಆತನ ಶೈಲಿ ಸರಳವಾಗಿದೆ, ಸಂಭಾಷಣೆಗಳಿಂದ ಕೂಡಿದೆ. ಆತನ ಇನ್ನೊಂದು ಕೃತಿ ಧೂರ್ತಾಖ್ಯಾನವೆಂಬುದು; ಇದು ಭಾರತೀಯ ಸಾಹಿತ್ಯದಲ್ಲೀ ಅಪೂರ್ವವಾದ ವಿಡಂಬನ ಕಾವ್ಯ. ಇಲ್ಲಿ ಐದು ಜನ ಧೂರ್ತರು-ನಾಲ್ಕು ಜನ ಗಂಡಸರು ಒಬ್ಬಳು ಹೆಂಗಸು-ತಮ್ಮ ಸ್ವಂತ ಅನುಭವಗಳನ್ನು ಹೇಳಿಕೊಳ್ಳುತ್ತಾರೆ. ಬರಿ ಊಹೆಗಳಿಂದ ಕೂಡಿ ಅಸಂಬದ್ಧವಾದ ಒಬ್ಬೊಬ್ಬನ ಆತ್ಮಕಥೆಯನ್ನೂ ಮಿಕ್ಕವರು ಪುರಾಣಗಳಿಂದ ತತ್ಸದೃಶವಾದ ಕಥೆಗಳಿಂದ ಸಮರ್ಥಿಸಿ ಸತ್ಯವೆನ್ನುತ್ತಾರೆ. ಈ ಪ್ರಕಾರ ಪುರಾಣೇತಿಹಾಸಗಳ ಕಥೆಗಳೆಲ್ಲ ಉಪಹಾಸಕ್ಕೆ ಈಡಾಗುತ್ತವೆ. ಈ ಪ್ರಬಂಧಕ್ಕೊಂದು ಸಾಹಿತ್ಯಕ ರೂಪವಿದೆ. ಅದರ ಕಲ್ಪನಾ ಚಾತುರಿಯೂ ರಚನೆಯೂ ಆದರ್ಶಪ್ರಾಯವಾಗಿವೆ. ಈ ಸಾಹಿತ್ಯ ಫಲ ಅದು ಹುಟ್ಟಿದ ಕಾಲಕ್ಕಿಂತ ಬಹುದೂರಗಾಮಿಯಾದುದು.

	ಹರಿಭದ್ರನ ಶಿಷ್ಯನಾದ ಉದ್ಯೋತನನ (ಕ್ರಿ.ಶ. 779) ಕುವಲಯ ಮಾಲಾ ಎಂಬುದು ತನ್ನ ಉದ್ದೇಶದಲ್ಲಿ ಸಮರಾ ಇಚ್ಛಕಹಾವನ್ನು ಹೋಲಿಸಿದರೂ ಪುಸ್ತಕದ ಉದ್ದಕ್ಕೂ ಸಾಮಾನ್ಯವಾಗಿ ಬಳಕೆಯಲ್ಲಿರುವ ಮಹಾರಾಷ್ಟ್ರಿಯನ್ನು ಉಪಯೋಗಿಸಿದರೂ ಪ್ರಾಕೃತವನ್ನೂ ಅಪಭ್ರಂಶವನ್ನೂ ಅಲ್ಲಲ್ಲಿ ಬಳಸುತ್ತದೆ. ಪ್ರೌಢ ಪ್ರಾಕೃತ ಸರಣಿಯಿಂದ ಸಂಭಾಷಣೆಗೆ ತಕ್ಕ ಅಪಭ್ರಂಶದ ಗದ್ಯಕ್ಕೆ ಕವಿ ಜರುಗಿದಾಗ ಜನರಾಡುವ ಮಾತನ್ನು ಆತ ಬಳಸುತ್ತಿದ್ದಾನೆ ಎಂಬ ಭಾವನೆ ನಿಸ್ಸಂಶಯವಾಗಿ ಮೂಡುತ್ತದೆ. ಕೃತಿಯುದ್ದಕ್ಕೂ ಮತ ಮತ್ತು ನೀತಿಯ ಧ್ವನಿ ಎದ್ದು ಕಾಣುತ್ತದೆ, ಹಿನ್ನೆಲೆಯಲ್ಲಿ ಜೈನ ಮತದ ಭಾವನೆ ಇರುವುದು ಸ್ಪಷ್ಟವಾಗಿದೆ. ಆದರೆ, ಒಟ್ಟಿನಲ್ಲಿ, ಬಾಣ ಮತ್ತು ದಂಡಿ ಇವರ ಕೃತಿಗಳಲ್ಲಿ ಹಾಸು ಹೊಕ್ಕಾಗಿರುವ ಕಾವ್ಯ ಪ್ರೇರಣೆಯೆ ಇಲ್ಲೂ ಬಹುತರವಾಗಿ ಕಂಡುಬರುತ್ತದೆ. ಗ್ರಂಥಕರ್ತ ಒಬ್ಬ ಪಂಡಿತಕವಿ. ತನಗೆ ಹಿಂದಿನ ಕವಿಗಳನ್ನೂ ಮತ್ತು ಅವರ ಕೃತಿಗಳನ್ನೂ ಹಾಗೂ ಯುವರಾಜ ತೋರಮಾನನನ್ನೂ ಕುರಿತು ಅವನಾಡುವ ಅಭಿಮಾನದ ಮಾತುಗಳು ಒಳ್ಳೆಯ ದಾಖಲೆಗಳು. ಏಕೆಂದರೆ ಆ ಕಾಲದ ರಾಜಕೀಯ ಮತ್ತು ಸಾಹಿತ್ಯ ಚರಿತ್ರೆಯ ಲೇಖಕನಿಗೆ ಅವು ಹೊಸ ವಿಷಯವನ್ನು ಒದಗಿಸಿಕೊಡುತ್ತವೆ.

	ಭೋಜನಿಗಿಂತಲೂ ಹಿಂದಿನವನಾದ ಕುತೂಹಲ ಎಂಬಾತನ ಲೀಲಾವತಿ ಒಳ್ಳೆಯ ಶೈಲಿಯ ಕಾಲ್ಪನಿಕ ಕಾವ್ಯ. ಗೌಡವಹೋದಲ್ಲಿ ಹೇಗೊ ಹಾಗೆ ಇದರಲ್ಲಿಯೂ ವಿಭಾಗಗಳಿಲ್ಲ. ಆದರೆ ಅಲ್ಲಿನಷ್ಟು ಪಾಂಡಿತ್ಯ ಪ್ರದರ್ಶನ ಇಲ್ಲಿಲ್ಲ. ಎಡೆತಡೆಯಿಲ್ಲದೆ ಓಡುವ ಕಥನವೇ ಹೆಚ್ಚು ಭಾಗವಿದೆ. ಸಿಂಹಳ ದ್ವೀಪದ ರಾಜಕುಮಾರಿಯಾದ ಲೀಲಾವತಿ ಮತ್ತು ಸಾತವಾಹನನೆಂಬ ದೊರೆಯ ಮದುವೆ ಅದರ ವಸ್ತು. ಕಥೆಯ ಎಳೆಗಳು ಸ್ವಲ್ಪ ಗೋಜಿಕೊಂಡಿವೆ. ಗ್ರಂಥಕರ್ತನ ಪ್ರೇಯಸಿಯೆ ಈ ಕಾವ್ಯ ರಚನೆಗೆ ಪ್ರೇರಕಳು; ಆ ಹೊಣೆಯನ್ನು ಆತ ವಿನಯದಿಂದ ಹೊರುತ್ತಾನೆ. ಕೆಲವು ದೃಶ್ಯಗಳು ಆಕರ್ಷಣೀಯವಾಗಿ ರೂಪುಗೊಂಡಿವೆ. ಭಾವನೆಗಳು ನವ್ಯವೂ ಸದ್ರುಚಿಯುಳ್ಳವೂ ಆಗಿವೆ. ಪ್ರಾಯಶಃ, ಹೇಮಚಂದ್ರನಿಗೆ ಈ ಕೃತಿಯ ಅರಿವಿತ್ತು. ಅಲ್ಲದೆ ಅದನ್ನು ಆತನು ತನ್ನ ವ್ಯಾಕರಣಕ್ಕೆ ಉಪಯೋಗಿಸಿಕೊಂಡೂ ಇರಬಹುದು.

	ಗುಣಚಂದ್ರ (ಕ್ರಿ.ಶ. 1082) ತನ್ನ ಮಹಾವೀರ ಚರಿಯಾ ಎಂಬ ಕೃತಿಯನ್ನು ಜೈನಮಹಾರಾಷ್ಟ್ರೀಯ ಗದ್ಯಪದ್ಯಗಳ ಅಲಂಕಾರಿಕ ಶೈಲಿಯಲ್ಲಿ ಬರೆದ. ಅದರಲ್ಲಿ ಅಪಭ್ರಂಶದ ಕೆಲವು ಲೇಖನ ಖಂಡಗಳಿವೆ. ವಿಷಯ ಮಹಾವೀರನ ಜೀವನ ಚರಿತ್ರೆ. ಅರ್ಧಭಾಗ ಆತನ ಪೂರ್ವಜನ್ಮಗಳ ವೃತ್ತಾಂಶಕ್ಕೆ ಮೀಸಲಾಗಿದೆ. ಭಾಷೆ ತುಂಬ ಯೋಗ್ಯವಾದ ರೀತಿಯಲ್ಲಿ ವ್ಯಾಕರಣಬದ್ಧವಾಗಿದೆ. ಗುಣಚಂದ್ರನ ಮಾತುಗಳೂ ಭಾವನೆಗಳೂ ಸಂಸ್ಕøತದ ಪ್ರೌಢಕಾವ್ಯಗಳಿಂದ ಪ್ರಭಾವಿತವಾಗಿವೆ, ಹಾಗೆಯೇ ಅವನ ಭಾಷೆಯೂ ಅದರಷ್ಟೆ ಶುದ್ಧವಾಗಿದೆ. ಅದು ಅಭ್ಯಸ್ತಕೃತರಚನೆ, ವಿದ್ವಾಂಸನ ಶ್ರಮದ ಫಲ. ಅಲ್ಲಿ ಉದ್ದವಾದ ಸಮಾಸಗಳೂ ಕವಿಸಮಯಗಳೂ ಹೇರಳವಾಗಿ ಕಂಡುಬರುತ್ತವೆ. ಅದೊಂದು ಸುಂದರವಾದ ಕಾವ್ಯ; ವಿದ್ವಾಂಸರಿಗೆ ಅಲ್ಲಿ ರಸದೂಟ ಸಿಕ್ಕುತ್ತದೆ. ಮೇಲೆ ನಿರೂಪಿಸಿದ ಕೆಲವು ಕಾವ್ಯಗಳಿಂದ ನಮಗೇನು ತಿಳಿದು ಬರುತ್ತದೆಯೆಂದರೆ, ಜನಸಾಮಾನ್ಯರಾಡುವ ಪ್ರಾಕೃತ ಭಾಷೆ ನುರಿತ ವಿದ್ವತ್ ಕವಿಗಳ ಕೈಯಲ್ಲಿ ಎಂಥ ಶೃಂಗಾರವನ್ನು ತಳೆಯಬಲ್ಲುದೆಂಬುದು. ಈ ಪ್ರಯೋಗವನ್ನು ಶೂದ್ರಕ ಜಯಪ್ರದವಾಗಿ ಆರಂಭಗೊಳಿಸಿದ್ದಾನೆ. ಪ್ರವರಸೇನ, ವಾಕ್ಪತಿ, ಉದ್ಯೋತನ, ರಾಜಶೇಖರ ಮತ್ತಿತರರು ಅದನ್ನು ಜಯಪ್ರದವಾಗಿಯೆ ಮುಂದುವರಿಸಿದ್ದಾರೆ. ಹೇಮಚಂದ್ರ (ಕ್ರಿ.ಶ. 1089-1172) ಮಧ್ಯಯುಗದ ಭಾರತದ ಸಾಹಿತ್ಯ ಲೋಕದಲ್ಲಿ ಎದ್ದು ಕಾಣುವ ದೊಡ್ಡವ್ಯಕ್ತಿ. ಗುಜರಾತಿನ ರಾಜರನ್ನು ಜೈನಮತಕ್ಕೆ ತಿರುಗಿಸಿ ಅಲ್ಲಿ ಆ ಮತಕ್ಕೆ ಮಹತ್ತ್ವವನ್ನು ಕೊಟ್ಟವ ಆತ. ಅಲ್ಲದೆ ಈಗಲೂ ಜನ ವ್ಯಾಸಂಗಮಾಡುತ್ತಿರುವ ಅನೇಕ ಶಾಸ್ತ್ರ ಗ್ರಂಥಗಳನ್ನು ವಿವಿಧ ಶಾಖೆಗಳಲ್ಲಿ ರಚಿಸುವುದರ ಮೂಲಕ ಒಂದು ಹೊಸ ಯುಗವನ್ನೇ ತೆರೆದು ಗುಜರಾತಿನ ಸಾಹಿತ್ಯಕ್ಕೆ ಶ್ರೇಷ್ಠ ಪದವಿಯನ್ನು ಕೊಟ್ಟವ. ಕಾಶ್ಮೀರದಿಂದ ಗುಜರಾತಿಗೆ ಸರಸ್ವತೀದೇವಿಯನ್ನು ಕರೆತಂದವ ಆತನೆಂಬ ಐತಿಹ್ಯವುಂಟು. ಮುಂದಿನ ಚರಿತ್ರೆ ಈ ಮಾತು ನಿಜವೆಂಬುದನ್ನು ವಸ್ತುತಃ ಹಾಗೂ ಸಾಂಕೇತಿಕವಾಗಿಯೂ ದೃಢಪಡಿಸುತ್ತದೆ. ತನ್ನ ವ್ಯಾಕರಣ ಹಾಗೂ ನಿಘಂಟುವಿನ ಮೂಲಕ ಆತ ಪ್ರಾಕೃತದ ಶಬ್ದಶಾಸ್ತ್ರಕ್ಕೆ ತಳಪಾಯ ಹಾಕಿದ್ದರೂ ಪಾಕೃತದಲ್ಲಿ ಒಂದು ಸ್ವತಂತ್ರವಾದ ಕಾವ್ಯವನ್ನು ರಚಿಸಲಿಲ್ಲ. ಆತನ ಕುಮಾರಪಾಲ ಚರಿತ ಎಂಬುದು ಕುಮಾರಪಾಲನ ಜೀವನಚರಿತ್ರೆಯನ್ನು ಹೇಳುತ್ತದೆ. ಆದರೆ ಅದರ ಉದ್ದೇಶ ಒಂದು ಇತಿಹಾಸವನ್ನಾಗಲಿ ಕಾವ್ಯವನ್ನಾಗಲಿ ರೂಪಿಸುವುದಲ್ಲ. ಅದರ ಲಕ್ಷ್ಯ ವ್ಯಾಕರಣ ಆತನ ದ್ವ್ಯಾಶ್ರಯ ಕಾವ್ಯದ ಉಪಸಂಹಾರ ಭಾಗವಾಗಿ ಅದು, ಭಟ್ಟಿ ಕಾವ್ಯದಂತೆ, ಪ್ರಾಕೃತ ವ್ಯಾಕರಣ ನಿಯಮಗಳಿಗೆ ತಕ್ಕ ಉದಾಹರಣೆಗಳನ್ನು ಕಲ್ಪಿಸುತ್ತದೆ. ಹೀಗೆ ಆತನ ಕೈಕಟ್ಟಿ ಹೋಗಿದ್ದರೂ ಆಗೀಗ ಅವನ ಕೃತಿಯಲ್ಲಿ ಪದ್ಯದ ಹೊಳಹೂ ಭಾಷೆಯ ಸಮರ್ಥ ಪ್ರಯೋಗವೂ ಕಂಡುಬರುತ್ತವೆ.

	ಈ ಪ್ರೌಢ ಶೈಲಿಯ ಪ್ರಾಕೃತ ವರರುಚಿ ಮುಂತಾದವರ ವ್ಯಾಕರಣವನ್ನು ಅವಲಂಬಿಸಿಯೇ ಹದಿನೆಂಟನೆಯ ಶತಮಾನದವರೆಗೂ ದಕ್ಷಿಣ ದೇಶದ ಕೊನೆಯಲ್ಲಿ ಅಭ್ಯಸ್ತವಾಗುತ್ತಿತ್ತೆಂಬ ಅಂಶ ಕುತೂಹಲಜನಕವಾಗಿದೆ. ಕೃಷ್ಣಲೀಲಾಶುಕ (ಕ್ರಿ.ಶ. 13ನೆಯ ಶತಮಾನ) ಕೃಷ್ಣ ಚರಿತ್ರೆಯನ್ನು ಕುರಿತು ಸಿರಿಚಿಂದಕವ್ವಂ ಎಂಬ ಹನ್ನೆರಡು ಸರ್ಗದ ಕಾವ್ಯವನ್ನು ವರರುಚಿ ಮತ್ತು ತ್ರಿವಿಕ್ರಮರ ಪ್ರಾಕೃತ ವ್ಯಾಕರಣ ಸೂತ್ರಗಳಿಗೆ ಉದಾಹರಣೆಗಳನ್ನು ಕಲ್ಪಿಸಲು ಬರೆದ. ಶ್ರೀಕಂಠನ (ಕ್ರಿ.ಶ. 15ನೆಯ ಅಥವಾ 17ನೆಯ ಶತಮಾನ) ಸೋರಿಚರಿತ್ರ ಎಂಬುದೊಂದು ಯಮಕ ಕಾವ್ಯ; ಅದರಲ್ಲಿ ಎರಡು ಸಾಲುಗಳ ಪದ್ಯಗಳಿವೆ; ಪ್ರತಿ ಸಾಲಿನ ಎಂಟು ಮಾತ್ರೆಗಳ ಶಬ್ದ ಸ್ವರೂಪ ಒಂದೇ ಆದರೂ ಅರ್ಥದಲ್ಲಿ ವ್ಯತ್ಯಾಸವುಂಟು. ಹದಿನೆಂಟನೆಯ ಶತಮಾನದ ಮಧ್ಯಭಾಗದಲ್ಲಿ ರಾಮ ಪಾಣಿವಾದ ಎಂಬಾತ ಕಂಸವಹೋ ಮತ್ತು ಉಷಾ-ನನಿರುದ್ಧಂ ಎಂಬ ಎರಡು ಚಿಕ್ಕ ಕಾವ್ಯಗಳನ್ನು ಬರೆದ. ಎರಡು ಕಾವ್ಯಗಳೂ ಕಲ್ಪನೆಯಲ್ಲಿ ಸುಂದರವಾಗಿವೆ, ರಚನೆಯಲ್ಲಿ ಪ್ರೌಢವಾಗಿವೆ. ಮೊದಲನೆಯದರ ವಸ್ತು ಹುಡುಗನಾಗಿದ್ದ ಕೃಷ್ಣ ಕಂಸನನ್ನು ಕೊಂದದ್ದು, ಎರಡನೆಯದು ಉಷಾ ಮತ್ತು ಅನಿರುದ್ದರ ವಿವಾಹವನ್ನು ಕುರಿತದ್ದು. ವಾಸ್ತವವಾಗಿ ಅವು ಪ್ರಾಕೃತ ಸಾಹಿತ್ಯದ ಕಡೆಗಾಲಕ್ಕೆ ಸಂಬಂಧಿಸಿದ ಕೃತಿಗಳು, ಆದರೂ ತಮ್ಮ ಕಾವ್ಯಗುಣಗಳಿಂದಲೂ ಶೈಲಿಯ ರಂಜಕತೆಯಿಂದಲೂ ಅವು ಮಧ್ಯಯುಗದ ಕಾವ್ಯಗಳ ಜತೆಗೆ ನಿಲ್ಲಲು ಅರ್ಹವಾಗಿವೆ.

	7 ಮತಸಿದ್ಧಾಂತಗಳಿಗೆ ಸಂಬಂಧಪಟ್ಟ ಪ್ರಕರಣ ಗ್ರಂಥಗಳು : ಕರ್ಮ ಎಂಬುದು ಜೈನಮತಕ್ಕೆ ವಿಶಿಷ್ಟವಾದ ಒಂದು ತತ್ತ್ವ. ಅಲ್ಲಿ ಅದು ಬಹು ವಿಸ್ತಾರವಾಗಿಯೂ ಮತ್ತು ಪಾರಿಭಾಷಿಕವಾಗಿಯೂ ಪ್ರತಿಪಾದಿಸಲ್ಪಟ್ಟಿದೆ. ಅದರ ವಿಶದೀಕರಣಕ್ಕೆ ಪ್ರಾಕೃತದಲ್ಲಿ ಅನೇಕ ಗ್ರಂಥಗಳು ರಚಿತವಾಗಿವೆ. ಈ ವಿಷಯ ಮೊದ ಮೊದಲು ಈಗ ನಷ್ಟವಾಗಿರುವ ಪೂರ್ವಗಳಲ್ಲಿ ಅಡಕವಾಗಿತ್ತೆಂದೂ ಮತ್ತು ಅದರ ಅವಶೇಷ ಧವಳಾ ಹಾಗೂ ಜಯಧವಳಾ ಸೂತ್ರಗಳ ಮತ್ತು ಮಹಾಧವಳಾ ಎಂಬ ವ್ಯಾಖ್ಯಾನಗಳ ತಳದಲ್ಲಿದೆಯೆಂದೂ ಹೇಳುವುದು ವಾಡಿಕೆ. ಸಾಂಪ್ರದಾಯಿಕ ವಸ್ತುವನ್ನು ಹೆಚ್ಚು ಕಡಿಮೆ ಸಂಗ್ರಹಿಸಿಕೊಡುವ ಶಿವಶರ್ಮನ ಕಮ್ಮಪಯಾಡಿ, ಚಂದರಶ್ಮಿಯ ಪಂಚಸಂಗ್ರಹ, ನೇಮಿಚಂದ್ರನ ಗೊಮ್ಮಟಸಾರ ಇತ್ಯಾದಿಗಳಂಥ ಇತರ ಕೃತಿಗಳುಂಟು. ಈ ಕೃತಿಗಳ ಮೇಲೆ ಸಂಸ್ಕøತದಲ್ಲಿ ದೊಡ್ಡ ದೊಡ್ಡ ಪ್ರೌಢ ವ್ಯಾಖ್ಯಾನಗಳು ರಚಿತವಾಗಿವೆ. ಅವುಗಳಲ್ಲಿ ತತ್ತ್ವದ ನೀರಸ ವಿವರಗಳನ್ನೆಲ್ಲ ಬಹಳ ಕಟ್ಟುನಿಟ್ಟಾಗಿಯೂ ಸೂಕ್ಷ್ಮವಾಗಿಯೂ ನಿರೂಪಿಸಲಾಗಿದೆ. ಹರಿಭದ್ರನ ಸಾವಯ ಪಣ್ಣತ್ತಿ ಎಂಬ ನಾನೂರು ಗಾಥೆಗಳ ಗ್ರಂಥ ಜೈನದರ್ಶನದ ಹಿನ್ನೆಲೆಯಲ್ಲಿ ಜೈನನೀತಿ ನಿಯಮಾವಳಿಯನ್ನು ವಿಶದವಾಗಿ ಒಟ್ಟೈಸಿರುವ ಕೋಶ. ಸಿದ್ಧಸೇನ ದಿವಾಕರ (ಕ್ರಿ.ಶ. ಆರನೆಯ ಅಥವಾ ಏಳನೆಯ ಶತಮಾನ) ಎಂಬಾತನ ವಿಚಾರವಾಗಿ ಅನೇಕ ದಂತಕಥೆಗಳಿವೆ. ಆತ ಪ್ರಥಮ ವರ್ಗದ ಕವಿ ಮತ್ತು ಶ್ರೇಷ್ಠತಾರ್ಕಿಕ. ಆತನ ಕಾವ್ಯಪ್ರತಿಭೆಗೆ ಸಂಸ್ಕøತದಲ್ಲಿ ಆತ ರಚಿಸಿರುವ ಸ್ತೋತ್ರಗಳು ಸಾಕ್ಷಿಯಾಗಿವೆ. ಪ್ರಾಕೃತದಲ್ಲಿರುವ ಆತನ ಸನ್ಮತಿತರ್ಕ ಎಂಬ ಗ್ರಂಥ ಜೈನದರ್ಶನದ ಪ್ರಮಾಣ ಪ್ರಮೇಯಗಳನ್ನೂ ನಯಗಳ ಮತ್ತು ಅನೇಕಾಂತವಾದಗಳ ಸಿದ್ಧಾಂತವನ್ನೂ ಬಹು ಚೆನ್ನಾಗಿ ವಿವರಿಸುವ ಉದ್ಗ್ರಂಥ. ಹರಿಭದ್ರನ ಧರ್ಮಸಂಗ್ರಹಣೇ ಎಂಬುದು ಜೈನಮತದ ತತ್ತ್ವಗಳ ಅನೇಕ ಮುಖಗಳನ್ನು ಕುರಿತು ಯಾವುದನ್ನೂ ಬಿಡದೆ ಹೇಳಿರುವ ಪ್ರಕರಣ ಗ್ರಂಥ. ಕುಮಾರನ ಕಟ್ಟಿಗೆಯಾಣುಪ್ಪೆಖ್ಖಾ ಎಂಬುದು ಮನದ ಹನ್ನೆರಡು ಮುಖಗಳನ್ನು ಮುಖ್ಯವಾಗಿ ನಿರೂಪಿಸುತ್ತದೆ. ಆದರೆ ಪ್ರಾಸಂಗಿಕವಾಗಿ ಮೂಲ ಜೈನತತ್ತ್ವಗಳ ವಿವರಣೆಯೂ ಅಡಗಿದೆ. ಚೇವಸೇನ ತನ್ನ ಭಾವಸಂಗ್ರಹ, ಆರಾಧನಾಸಾರ ಮತ್ತು ತತ್ತ್ವಸಾರ ಎಂಬ ಗ್ರಂಥಗಳಲ್ಲಿ ಜೈನಮತದ ವಿವಿಧ ತತ್ತ್ವವಿಷಯಗಳನ್ನು ಕುರಿತು ಬರೆಯುತ್ತಾನೆ. ಆತನ ದರ್ಶನಸಾರ ಎಂಬುದು (ಕ್ರಿ.ಶ. 933) ಬಗೆ ಬಗೆಯ ಸಂಘಗಳ ಬಗೆಗೆ ಸಾಂಪ್ರದಾಯಿಕವಾಗಿ ತಿಳಿದು ಬಂದಿರುವುದನ್ನು ಉಲ್ಲೇಖಸಿರುವುದರಿಂದ, ಐತಿಹಾಸಿಕ ದೃಷ್ಟಿಯಲ್ಲಿ ಅದಕ್ಕೆ ತಕ್ಕ ಮಟ್ಟಿನ ಪ್ರಾಮುಖ್ಯವಿದೆ. ಜೈನ ಮತ್ತು ಬೌದ್ಧ ಮತಗಳ ಹಿನ್ನೆಲೆಯಲ್ಲಿ ಯೋಗ ರಹಸ್ಯಗಳನ್ನು ಕುರಿತ ಕೆಲವು ಅಪಭ್ರಂಶ ಗ್ರಂಥಗಳಿವೆ. ಜೋಯಿಂದುವಿನ (ಕ್ರಿ.ಶ. ಆರನೆಯ ಶತಮಾನ) ಪರಮಪ್ಪಪಯಾಸು ಮತ್ತು ಯೋಗಸಾರ, ಮತ್ತು ಕಾನ ಮತ್ತು ಸರಹಾ ಎಂಬವರ ದೊಹಕೋಶಗಳು-ಇತ್ಯಾದಿಗಳು.

	8 ವ್ಯಾಕರಣಗಳು : ಪ್ರಾಕೃತದಲ್ಲಿ ವ್ಯಾಕರಣಗಳಿದ್ದವೆಂಬ ಅಂಶ ಪ್ರಾಸ್ತಾವಿಕವಾಗಿ ಉದ್ಧøತವಾದ ಕೆಲವು ವಾಕ್ಯಗಳಿಂದ ಕಂಡುಬಂದರೂ ಈಗ ಉಪಲಬ್ಧವಾಗಿರುವ ಗ್ರಂಥಗಳೆಲ್ಲ ಸಂಸ್ಕøತ ವ್ಯಾಕರಣ ಗ್ರಂಥಗಳ ಮಾದರಿಯಲ್ಲೇ, ಆ ಭಾಷೆಯ ವ್ಯವಸ್ಥಿತವಾದ ವಿಶ್ಲೇಷಣದಲ್ಲಿ ಕಂಡುಬರುವ ಗುಣದೋಷಗಳೆಲ್ಲಕ್ಕೂ ತಾವೂ ಸಹಜವಾಗಿಯೇ ಬಾಧ್ಯರೆನಿಸಿ, ಸಂಸ್ಕøತದಲ್ಲಿ ರಚಿತವಾಗಿವೆ. ಪ್ರಾಕೃತ ಶಾಸನಗಳನ್ನು ಅರ್ಥಮಾಡಿಕೊಳ್ಳಲು ಅವುಗಳಿಂದ ಯಾವ ನೆರವೂ ದೊರೆಯುವುದಿಲ್ಲ. ಜೈನಾಗಮದ ಅರ್ಧಮಾಗಧಿಗೂ ಅವುಗಳಿಂದ ಸಹಾಯ ಬಹಳ ಕಡಿಮೆ. ಅವುಗಳಲ್ಲಿ ಅನೇಕ ಅರೆಕೊರೆಯಾಗಿವೆ, ಕಾಟಾಚಾರಕ್ಕೆ ಮಾಡಿ ಮುಗಿಸಿದಂತಿವೆ. ಭಾಮಹ (ಕ್ರಿ.ಶ. 700) ಮೊದಲಾದವರಿಂದ ವ್ಯಾಖ್ಯಾತವಾಗಿರುವ ವರರುಚಿಯ ವ್ಯಾಕರಣ ಮತ್ತು ಚಂದನ ಎಂಬಾತನ ವ್ಯಾಕರಣಗಳನ್ನು ಮುಂದಿನ ಪೀಳಿಗೆಯ ಗ್ರಂಥಕರ್ತರು ಬಳಸಿಕೊಂಡಿದ್ದರೂ ಅವು ಪ್ರತ್ಯೇಕವಾಗಿ ಸ್ವಲ್ಪ ದೂರದಲ್ಲಿಯೇ ನಿಂತಿವೆ. ಹೇಮಚಂದ್ರ, ತ್ರಿವಿಕ್ರಮ, ಸಿಂಹರಾಜ, ಲಕ್ಷ್ಮೀಧರ ಮುಂತಾದವರವು ಒಂದು ಗುಂಪು. ಪುರುಷೋತ್ತಮ, ರಾಮತರ್ಕವಾಗೀಶ, ಮಾರ್ಕಂಡೇಯ ಮುಂತಾದವರದು ಮತ್ತೊಂದು ಗುಂಪು. ಉಪಭಾಷೆಗಳ ಸಂಖ್ಯೆ ಮತ್ತು ಅವುಗಳ ವಿವರಣೆಯಲ್ಲಿ ಇವು ವ್ಯತ್ಯಾಸವನ್ನು ತೋರುತ್ತವೆ. ಹೇಮಚಂದ್ರ ಮತ್ತು ಮಾರ್ಕಂಡೇಯ ಇವರಿಬ್ಬರು ಮಾತ್ರ ತಮಗೆ ಹಿಂದಿನ ಸಾಹಿತ್ಯದ ನಿಕಟ ಪರಿಚಯವಿತ್ತೆಂಬುದನ್ನು ತೋರಿಸಿಕೊಡುತ್ತಾರೆ. ಅಪಭ್ರಂಶವನ್ನು ಕುರಿತು ವಿಮರ್ಶಿಸುವಾಗ ಹೇಮಚಂದ್ರ ತೋರಿಕೊಡುತ್ತಾರೆ. ಅಪಭ್ರಂಶವನ್ನು ಕುರಿತು ವಿಮರ್ಶಿಸುವಾಗ ಹೇಮಚಂದ್ರ ವೈಯಾಕರಣಿಯ ಹೊಣೆಯನ್ನು ತುಂಬ ಚೆನ್ನಾಗಿ ನಿರ್ವಹಿಸಿದ್ದಾನೆ. ಈ ವ್ಯಾಕರಣಗಳ ಪೈಕಿ ಹಲವಾರು ಗ್ರಂಥಗಳು ನಮ್ಮ ಅವಶ್ಯಕತೆಗಳ ಮಟ್ಟಕ್ಕೂ ತುಂಬ ಕೆಳಗಿವೆ. ಎಷ್ಟೇ ಅಸಮರ್ಪಕವಾಗಿದ್ದರೂ ವರರುಚಿ, ಚಂದ, ಹೇಮಚಂದ್ರ ಮತ್ತು ಮಾರ್ಕಂಡೇಯ ಇವರ ಗ್ರಂಥಗಳು ಪ್ರಾಕೃತ ಭಾಷೆ ಮತ್ತು ಸಾಹಿತ್ಯಗಳನ್ನು ತಿಳಿದುಕೊಳ್ಳಲು ತುಂಬ ಬೆಲೆಯುಳ್ಳ ಸಾಧನಗಳಾಗಿರುವುದಲ್ಲದೆ ಮಧ್ಯಯುಗದ ಇಂಡೋ ಆರ್ಯನ್ ಭಾಷೆಯ ಸರ್ವಾಂಗೀಣ ವ್ಯಾಸಂಗಕ್ಕೂ ತುಂಬ ಉಪಕಾರಿಗಳಾಗಿವೆ.

	9 ನಿಘಂಟುಗಳು : ಧನಪಾಲ ತನ್ನ ತಂಗಿ ಸುಂದರಿಗೋಸ್ಕರವಾಗಿ ಪಾಇಯ ಲಚ್ಚೀ ನಾಮಮಾಲಾ (ಕ್ರಿ.ಶ. 972-973) ಎಂಬ ಪರ್ಯಾಯ ಶಬ್ದಗಳ ಪಟ್ಟಿಯನ್ನು ರಚಿಸಿದ. ಹೇಮಚಂದ್ರನ ದೇಶೀ ನಾಮಮಾಲಾ ಎಂಬುದು ಸಂಸ್ಕøತ ಮೂಲಕ್ಕೆ ನೇರವಾಗಿ ಆಗಲಿ ಅಥವಾ ಓರೆಯಾಗಿಯಾಗಲಿ, ಸಂಬಂಧಪಡದ ದೇಶೀಯ ಶಬ್ದಗಳನ್ನು ಪಟ್ಟಿ ಮಾಡಿ ಉದಾಹರಣೆಗಳ ಮೂಲಕ ಅವುಗಳ ಪ್ರಯೋಗವನ್ನು ಎತ್ತಿಕೊಡಬೇಕೆಂಬ ವಿಶಿಷ್ಟೋದ್ಧೇಶವುಳ್ಳದ್ದಾಗಿದೆ. ಈ ಕ್ಷೇತ್ರದಲ್ಲಿ ಕೆಲಸಮಾಡಿದ ತನಗೆ ಹಿಂದಿನ ಹಲವಾರು ಪಂಡಿತರ ಹೆಸರುಗಳನ್ನು ಈತ ಹೇಳುತ್ತಾನೆ. ಆದರೆ ಅವರ ಕೃತಿಗಳು ನಮಗೆ ಲಭ್ಯವಾಗಿಲ್ಲ. ಮಧ್ಯಯುಗದ ಮತ್ತು ಆಧುನಿಕ ಭಾರತೀಯ ಶಬ್ದಭಂಡಾರದಲ್ಲಿ ಆಸಕ್ತನಾದ ಭಾಷಾಶಾಸ್ತ್ರಜ್ಞನಿಗೆ ಇದು ಬಹು ಬೆಲೆಯುಳ್ಳ ಆಕರ ಗ್ರಂಥವಾಗಿದೆ.

	10 ಅಲಂಕಾರ ಮತ್ತು ಛಂದಸ್ಸುಗಳನ್ನು ಕುರಿತ ಗ್ರಂಥಗಳು : ಹರಿ ಎಂಬಾತನಿಂದ ರಚಿತವಾದುದೆಂದು ಹೇಳಲಾದ ಅಲಂಕಾರದಪ್ಪಣ ಎಂಬ ಕೃತಿ; ಇದರ ಕರ್ತೃ ಯಾರೆಂಬುದು ತಿಳಿಯದು. ಪ್ರಾಕೃತಕ್ಕೆ ಸಹಜವಾದ ಛಂದಸ್ಸು ಗಾಥಾ ಎಂಬುದು. ಆದರೆ ಪ್ರೌಢಕವಿಗಳೆಲ್ಲ ಸಂಸ್ಕøತದಲ್ಲಿ ಈಗ ಬಳಕೆಯಲ್ಲಿರುವ ದೊಡ್ಡ ದೊಡ್ಡ ಅಕ್ಷರ ಛಂದಸ್ಸುಗಳನ್ನೆ ಬಳಸಿದ್ದಾರೆ. ಆದರೆ, ಅಪಭ್ರಂಶ ಕೃತಿಗಳಲ್ಲಿ ಛಂದಸ್ಸಿನ ತೀರ ಹೊಸದಾರಿಗಳು ಕಂಡುಬರುತ್ತವೆ.

	ನಂದಿತಾಢ್ಯ ಎಂಬಾತ ತನ್ನ ಗಾಥಾಲಕ್ಷಣ ಎಂಬ ಗ್ರಂಥದಲ್ಲಿ ಗಾಥೆಗಳಲ್ಲಿ ಎಷ್ಟು ಬಗೆಗಳಿವೆ ಎಂಬ ವಿಷಯವನ್ನು ಕೂಲಂಕಷವಾಗಿ ವಿವರಿಸಿದ್ದಾನೆ. ಸ್ವಯಂಭುವಿನ ಸ್ವಯಂಭೂಚ್ಛಂದ ಎಂಬುದು ವಿವಿಧ ಛಂದಸ್ಸುಗಳನ್ನು ಸಮೀಕ್ಷಿಸುವುದಲ್ಲದೆ ಸುಮಾರು ಐವತ್ತಕ್ಕೂ ಮೀರಿದ ಕವಿಗಳ ಹೆಸರುಗಳನ್ನು ಹೇಳಿ ಅವರ ಪದ್ಯಗಳನ್ನು ಉದಾಹರಣೆಗೆ ಎತ್ತಿಕೊಡುತ್ತದೆ. ವೃತ್ತಜಾತಿ ಸಮುಚ್ಚಯ ಎಂಬುದು ಒಂದು ಸಮಗ್ರಕೃತಿ. ಆ ಬಳಿಕ ಕವಿದರ್ಪಣ, ರತ್ನಶೇಖರನ ಛಂದಃಕೋಶ ಮತ್ತು ಪ್ರಾಕೃತ ಪಿಂಗಳ ಎಂಬವು ಪ್ರಾಕೃತ ಛಂದಸ್ಸುಗಳ ವಿಷಯದಲ್ಲಿ ಹೇರಳವಾದ ವಿವರಗಳನ್ನು ಕೊಡುತ್ತವೆ. ವೃತ್ತರತ್ನಾಕರದಂಥ ಸಂಸ್ಕøತ ಗ್ರಂಥಗಳು ಪ್ರಾಕೃತ ಛಂದಸ್ಸುಗಳನ್ನು ವಿವರಿಸುತ್ತವೆ. ಹೇಮಚಂದ್ರನ ಛಂದೋನುಶಾಸನ ಎಂಬುದು ಪ್ರಾಕೃತ ಛಂದಸ್ಸುಗಳ ವಿಚಾರದಲ್ಲಿ ತುಂಬ ಬೆಲೆಯುಳ್ಳ ಗ್ರಂಥ. ವೇಲಣಕರ ಎಂಬ ವಿದ್ವಾಂಸರು ಅಪಭ್ರಂಶ ವೃತ್ತಗಳ ಸಕ್ರಮ ಬದ್ಧವಾದ ವಿವರಣೆಯನ್ನು ತಮ್ಮ ಗ್ರಂಥದಲ್ಲಿ ಮಾಡಿದ್ದಾರೆ.

	11 ಜೋತಿಶ್ಕಾಸ್ತ್ರ ಮತ್ತು ವೈದೈಗ್ರಂಥಗಳು : ಜಗತ್ ಸೃಷ್ಟಿ ಮತ್ತು ಖಗೋಳ ವಿಜ್ಞಾನದ ಬಗೆಗೆ ಪಾಮನಂದಿಯ ಜಂಬೂಡ್ಡೀವ-ಪಣ್ಣತ್ತಿ ಸಂಗ್ರಹ ಎಂಬ ಗ್ರಂಥ ನಮಗೆ ಉಪಲಬ್ಧವಾಗಿವೆ. ಜೋನೀಪಾಹುಡ್ ಎಂಬುದು ಒಂದು ಪ್ರಾಚೀನ ವೈದ್ಯ ಮತ್ತು ತಂತ್ರ ಶಾಸ್ತ್ರದ ಗ್ರಂಥ. ಅದು ನಮಗೆ ಉಪಲಬ್ಧವಿಲ್ಲ. ಆದರೆ ಅದರಲ್ಲಿನ ವಿಷಯ ಹರಿಷೇಣ ಮತ್ತು ಯಶಃಕೀರ್ತಿ (ಕ್ರಿ. ಶ. 12ನೆಯ ಶತಮಾನ) ಎಂಬಿಬ್ಬರೂ ಸೇರಿ ಬರೆದರೆಂದು ಹೇಳಲಾಗಿರುವ ಜಗತ್ ಸುಂದರೀ-ಯೋಗಮಾಲಾ ಎಂಬ ಗ್ರಂಥದಲ್ಲಿ ಅಡಕವಾಗಿರುವಂತಿದೆ. ಮಾಹುಕನ (ಕ್ರಿ.ಶ.830) ಹರಮೇಖಲಾ ಎಂಬುದೊಂದು ವೈದ್ಯಶಾಸ್ತ್ರ ಗ್ರಂಥ. ಅದರಲ್ಲಿ ಅನೇಕ ವಿಷಯಗಳು ಪ್ರತಿಪಾದಿತವಾಗಿವೆ. ಅದು ಸಕಲ ಜೀವಚಿಂತಾಮಣಿ. ಗಗನ ದೇವನ ರಿಟ್ಟಹ ಸಮುಚ್ಛಯ (ಕ್ರಿ.ಶ. ಹನ್ನೊಂದನೆಯ ಶತಮಾನ) ಎಂಬುದು ಶಕುನ ಮುಂತಾದುವನ್ನು ಹೇಳುವ ಗ್ರಂಥ.

	12 ಉಪಸಂಹಾರ : ಈ ಭಾಷೆಯಲ್ಲಿ ಕಂಡುಬರುವ ಶಾಶ್ವತ ಮೌಲ್ಯ (ಗುಣ) ಸಂಪನ್ನತೆಯನ್ನು ಪರಿಗಣಿಸಿದಲ್ಲಿ, ಮುಖ್ಯವಾಗಿ ಪ್ರಾಕೃತಿಕ ಮತ್ತು ಸಾಮಾಜಿಕ ಪರಿಸರಗಳಲ್ಲೂ ಮಾನವ ಪಡುವ ವಿವಿಧಾನುಭೂತಿಗಳ ಹಿನ್ನೆಲೆಯಲ್ಲೂ ರೂಪಗೊಳ್ಳುವ ವಿಚಾರಧಾರೆ ಹಾಗೂ ಅದರ ಪ್ರತಿಪಾದನ ಕ್ರಮ ಇವನ್ನು ಗಣನೆಗೆ ತೆಗೆದುಕೊಂಡು ಪರಿಶೀಲಿಸಿದರೆ, ಪ್ರಾಕೃತ ಬಹುಮುಖವಾದ ಸಿದ್ಧಿಯನ್ನು ಪಡೆದಿದೆ ಎನ್ನಬಹುದು. ಇಡೀ ಜಗತ್ತಿನ ಶ್ರೇಷ್ಠತಮ ಚಕ್ರವರ್ತಿಗಳಲ್ಲಿ ಒಬ್ಬನಾದವನ ಉದಾರ ವಿಚಾರಗಳು ಅದರಲ್ಲಿ ಲಿಖಿತವಾಗಿವೆ. ದರ್ಶನದಲ್ಲಿ ಅತ್ಯಂತ ವಸ್ತುನಿಷ್ಠವೂ ನೀತಿಯಲ್ಲಿ ಅತ್ಯಂತ ತಪೋನಿಷ್ಠವೂ ಭಾವನೆಯಲ್ಲಿ ಸರ್ವಭೂತ ದಯಾಸಂಪನ್ನವೂ ಆದ ಧಾರ್ಮಿಕ ತತ್ತ್ವವೊಂದು ಅದರಲ್ಲಿ ಅಡಕವಾಗಿದೆ. ಕಳೆದ ಎರಡು ಸಾವಿರ ವರ್ಷಗಳಿಗಿಂತಲೂ ಹಿಂದಿನಿಂದ ನಡೆದು ಬಂದಿರುವ ಭಾಷೆಯ ಮತ್ತು ಛಂದಸ್ಸಿನ ವಿಕಾಸಗಳ ಬೆಲೆಯುಳ್ಳ, ಆದರೆ ಜಟಿಲವಾಗಿರುವ, ಚಿತ್ರವನ್ನು ಅದು ನಮ್ಮ ಕಣ್ಣುಮುಂದೆ ನಿಲ್ಲಿಸುತ್ತದೆ. ಅದರಲ್ಲಿ ವರ್ಣಿತವಾಗಿರುವ ಸಮಾಜಶ್ರೇಷ್ಠ ವರ್ಗದವರಿಗಿಂತಲೂ ಹೆಚ್ಚಾಗಿ ಸಾಮಾನ್ಯ ಜನರದು. ಅದರ ಸಾಹಿತ್ಯನಿಧಿಗಳಿಗೆ ಶ್ರೇಷ್ಠಸಾಧುಗಳೂ ಉದ್ದಂಡ ಕವಿಗಳೂ ವಿಶ್ವಾಸದಿಂದ ತಮ್ಮ ಕಾಣಿಕೆಗಳನ್ನು ಸಲ್ಲಿಸಿದ್ದಾರೆ. ಅವರಲ್ಲಿ ಕೆಲವರು ತಮ್ಮ ವೈಯಕ್ತಿಕ ಜೀವನವನ್ನು ಕುರಿತು ಮುಚ್ಚುಮರೆಯಿಲ್ಲದೆ ನುಡಿದಿದ್ದಾರೆ. ಅವರ ಲೇಖನಗಳಿಂದ ಲಭ್ಯವಾಗಿರುವ ಕಾಲಕ್ರಮಾಂಶಗಳು ಭಾರತೀಯ ಸಾಹಿತ್ಯ ಚರಿತ್ರೆಯ ಪುನರ್ನಿರ್ಮಾಣಕ್ಕೆ ತುಂಬ ಉಪಯುಕ್ತವಾಗಿವೆ. ಯಾವುದರ ತೊಡೆಯ ಮೇಲೆ ಆಧುನಿಕ ಭಾರತೀಯ ಭಾಷೆಗಳು ಕುಳಿತಾಡಿ ಬೆಳೆದು ಬಂದಿವೆಯೋ ಅಂಥ ಪ್ರಾಕೃತವನ್ನು ಕೈ ಬಿಟ್ಟರೆ ಭಾರತೀಯ ಭಾಷಾಶಾಸ್ತ್ರಕ್ಕೆ ಕಾರ್ಪಣ್ಯವೊದಗುತ್ತದೆ. ಭಾರತೀಯ ಸಂಸ್ಕøತಿ ಮತ್ತು ನಾಗರಿಕತೆಯ ಚಿತ್ರಣಕ್ಕೆ ಮುಖ್ಯ ಹಾಗೂ ಗಮನಾರ್ಹವಾದ ವಿವರಗಳನ್ನು ಒದಗಿಸುವುದರಲ್ಲಿ ಪ್ರಾಕೃತ ನಮಗೆ ಬಹುದೂರದವರೆಗೂ ಸಹಾಯ ಮಾಡುತ್ತದೆ.
	(ಎ.ಎನ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ